ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದ, ಮೊದಲ ದಿನದಾಟವನ್ನು ಸ್ಟಾಂಡ್‌ನಲ್ಲಿ ಕುಳಿತು ವೀಕ್ಷಿಸುತ್ತಿದ್ದ ಬಾಂಗ್ಲಾದೇಶದ ಅಭಿಮಾನಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆದಿದ್ದಾಗಿ ಹೇಳಿದ್ದಾರೆ. ಆದರೆ ಘಟನೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ತನ್ನನ್ನು ತಾನು ಸೂಪರ್ ಫ್ಯಾನ್ ರಾಬಿ ಎಂದು ಪರಿಚಯಿಸಿಕೊಳ್ಳುವ, ಹುಲಿ ವೇಷ ಧರಿಸಿದ್ದ ವ್ಯಕ್ತಿ, ಗ್ರೀನ್ ಪಾರ್ಕ್ ಮೈದಾನದ ‘ಸಿ’ ಸ್ಟ್ಯಾಂಡ್‌ನಲ್ಲಿ ಹಲ್ಲೆಗೊಳಗಾಗಿದ್ದಾಗಿ ಹೇಳಿದ್ದಾರೆ.
‘ಸ್ಥಳದಲ್ಲಿ ಏನಾಯಿತು ಎನ್ನುವುದನ್ನು ಸರಿಯಾಗಿ ರಾಬಿ ವಿವರಿಸಲಿಲ್ಲ. ಆದರೆ ಅವರು ಸಂಕಷ್ಟಕ್ಕೀಡಾಗಿದ್ದರು’ ಎಂದು ಉತ್ತರ ಪ್ರದೇಶ ಕ್ರಿಕೆಟ್ ಎಸೋಶಿಯೇಷನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಡೆದಾಟದ ವೇಳೆ ವ್ಯಕ್ತಿಯೊಬ್ಬರು ತನ್ನ ಹೊಟ್ಟೆಗೆ ಗುದ್ದಿದ್ದಾರೆ ಎಂದು ರಾಬಿ ಮಾಧ್ಯಮದವರೊಂದಿಗೆ ಹೇಳಿದ್ದಾರೆ.
‘ಅವರು ಸ್ಟ್ಯಾಂಡ್‌ನಿಂದ ಹೊರಬರುತ್ತಿದ್ದಂತೆ, ನೋವಿನಿಂದ ಬಿಕ್ಕಳಿಸುತ್ತಿದ್ದರು. ಅವರು ಮೂರ್ಛೆ ಹೋಗುತ್ತಿರುವಂತೆ ಕಾಣುತ್ತಿತ್ತು. ಕುಳಿತುಕೊಳ್ಳಲು ಅವರಿಗೆ ಕುರ್ಚಿಯನ್ನು ನೀಡಲಾಯಿತಾದರೂ ಅವರು ಕೆಳಗೆ ಬಿದ್ದರು’ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಟೇಡಿಯಂನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಭಿಮಾನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಅವರಿಗಾಗಿ ಆ್ಯಂಬುಲೆನ್ಸ್ ತರಿಸಲಾಯಿತು. ಯಾರಾದರೂ ಅವರಿಗೆ ಹೊಡೆದಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ. ಆ ಸ್ಟ್ಯಾಂಡ್‌ನಲ್ಲಿ ಅಭಿಮಾನಿಗಳನ್ನು ಗಮನಿಸಲು ನಾವು ಒಬ್ಬ ಕಾನ್‌ಸ್ಟೇಬಲ್ ಅನ್ನು ನಿಯೋಜಿಸಿದ್ದೇವೆ. ರಾಬಿ ಏನು ಹೇಳುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗಲಿಲ್ಲ. ಅವರು ನೋವಿನಿಂದ ನರಳುತ್ತಿದ್ದರು’ ಎಂದು ಅಧಿಕಾರಿ ಹೇಳಿದ್ದಾರೆ.
ಆ್ಯಂಬುಲೆನ್ಸ್ ಬರಲು ತಡವಾಗಿದ್ದರಿಂದ ಸ್ಟೇಡಿಯಂನ ವೈದ್ಯಕೀಯ ತಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.