ಕಾನ್ಪುರ: ಸ್ವದೇಶದಲ್ಲಿ ಹದಿನೆಂಟನೇ ಟೆಸ್ಟ್ ಸರಣಿಯನ್ನು ಜಯಿಸಿ ದಾಖಲೆ ಬರೆಯುವತ್ತ ಆತಿಥೇಯ ಭಾರತ ತಂಡ ಕಣ್ಣಿಟ್ಟಿದೆ. ರೋಹಿತ್ ಶರ್ಮಾ ನಾಯಕತ್ವದ ತಂಡವು ಶುಕ್ರವಾರ ಇಲ್ಲಿಯ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಎರಡು ಪಂದ್ಯಗಳ ಈ ಸರಣಿಯ ಮೊದಲ ಹಣಾಹಣಿಯಲ್ಲಿ ಭಾರತ ತಂಡವು ಜಯಿಸಿತ್ತು. ಚೆನ್ನೈನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಆಲ್‌ರೌಂಡ್ ಆಟದ ಬಲದಿಂದ 280 ರನ್‌ಗಳ ಜಯಸಾಧಿಸಿತ್ತು. ಇವರಿಬ್ಬರೂ ಮೊದಲ ಇನಿಂಗ್ಸ್‌ನಲ್ಲಿ ಏಳನೇ ವಿಕೆಟ್ ಜೊತೆಯಾಟದಲ್ಲಿ 199 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಇಬ್ಬರೂ ಸೇರಿ 9 ವಿಕೆಟ್ ಹಂಚಿಕೊಂಡಿದ್ದರು.
ವಿಕೆಟ್‌ಕೀಪರ್ –ಬ್ಯಾಟರ್ ರಿಷಭ್ ಪಂತ್ ಅವರೂ ಶತಕ ಬಾರಿಸಿ ತಮ್ಮ ‘ಕಮ್‌ಬ್ಯಾಕ್’ ಘೋಷಿಸಿದ್ದರು. ಶುಭಮನ್ ಗಿಲ್ ಕೂಡ ಶತಕ ಗಳಿಸಿದ್ದರು. ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಹೊಸ ಪ್ರತಿಭೆ ಆಕಾಶದೀಪ್ ಅವರ ಬೌಲಿಂಗ್ ರಂಗೇರಿತ್ತು.
ಆದರೆ ಭಾರತ ತಂಡದ ಅನುಭವಿ ಬ್ಯಾಟರ್‌ಗಳು ತಮ್ಮ ಲಯಕ್ಕೆ ಮರಳುವರೇ ಎಂಬ ಕುತೂಹಲ ಈ ಪಂದ್ಯದಲ್ಲಿದೆ. ಏಕೆಂದರೆ; ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಹೆಚ್ಚು ರನ್ ಗಳಿಸಲಿಲ್ಲ. ರೋಹಿತ್ ಮತ್ತು ವಿರಾಟ್ ಎರಡೂ ಇನಿಂಗ್ಸ್‌ಗಳಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ಸಫಲರಾಗಲಿಲ್ಲ. ರಾಹುಲ್ ಎರಡನೇ ಇನಿಂಗ್ಸ್‌ನಲ್ಲಿ ಆಟಕ್ಕೆ ಕುದುರಿಕೊಂಡ ಹೊತ್ತಿನಲ್ಲಿ ಡಿಕ್ಲೇರ್ ಘೋಷಿಸಲಾಗಿತ್ತು. ಆದ್ದರಿಂದ ಅವರಿಗೆ ಇಲ್ಲಿ ಮತ್ತೊಂದು ಅವಕಾಶದ ನಿರೀಕ್ಷೆ ಇದೆ.
ಬಾಂಗ್ಲಾ ತಂಡವು ಪಾಕಿಸ್ತಾನ ತಂಡದ ಎದುರು 2–0ಯಿಂದ ಟೆಸ್ಟ್ ಸರಣಿ ಜಯಿಸಿತ್ತು. ಪಾಕ್ ತಂಡವನ್ನು ಅದರ ನೆಲದಲ್ಲಿಯೇ ಮಣಿಸಿದ್ದ ಭರ್ತಿ ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಬಂದಿತ್ತು. ಆದರೆ ಚೆನ್ನೈ ಬಿಸಿಲಿನಲ್ಲಿ ಪ್ರವಾಸಿ ತಂಡದ ಆತ್ಮವಿಶ್ವಾಸ ಕರಗಿಹೋಯಿತು. ನಜ್ಮುಲ್ ಹುಸೇನ್ ಶಾಂತೊ ನಾಯಕತ್ವದ ತಂಡಕ್ಕೆ ಈಗೇನಿದ್ದರೂ ಸರಣಿ ಸಮ ಮಾಡಿಕೊಳ್ಳುವ ಅವಕಾಶವೊಂದು ಬಾಕಿ ಉಳಿದಿದೆ.
ಬಾಂಗ್ಲಾ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ತಮ್ಮ ದೇಶದ ಕ್ರಿಕೆಟ್‌ಗಾಗಿ ನೀಡಿರುವ ಕೊಡುಗೆ ದೊಡ್ಡದು. ಈ ವಿಷಯದಲ್ಲಿ ಅವರ ಬದ್ಧತೆಯೂ ದೊಡ್ಡದು. ಆದರೆ ಬಾಂಗ್ಲಾದಲ್ಲಿ ಅವಾಮಿ ಲೀಗ್ ಪಕ್ಷವು ಅಧಿಕಾರದಿಂದ ಪತನವಾದ ನಂತರ ಹಲವು ಕ್ರಿಮಿನಲ್ ಆರೋಪಗಳಿಗೆ ಅವರು ಈಡಾಗಿದ್ದಾರೆ. 37 ವರ್ಷದ ಒತ್ತಡದಲ್ಲಿ ಆಡುತ್ತಿರುವುದು ತಂಡದ ಬಲ ಕಡಿಮೆಯಾಗಲು ಕಾರಣವಾಗಿದೆ. ಬಾಂಗ್ಲಾ ತಂಡವು ಬಲಾಢ್ಯ ಭಾರತ ಬಳಗದ ಎದುರು ಗೆಲ್ಲಬೇಕಾದರೆ ಎಲ್ಲ ಆಯಾಮಗಳಿಂದಲೂ ಸಿದ್ಧವಾಗಬೇಕಿದೆ. 2013ರಿಂದ ಇಲ್ಲಿಯವರೆಗೆ ಭಾರತ ತಂಡವು ತಾಯ್ನೆಲದಲ್ಲಿ ಕೇವಲ 4 ಟೆಸ್ಟ್ ಪಂದ್ಯಗಳನ್ನು ಮಾತ್ರ ಸೋತಿದೆ. ಗೆಲುವಿನದ್ದೇ ಸಿಂಹಪಾಲು ಇದೆ.
ಪಂದ್ಯ ಆರಂಭ: ಬೆಳಿಗ್ಗೆ 9
ನೇರಪ್ರಸಾರ: ಜಿಯೊ ಸಿನಿಮಾ, ಟಿ.ವಿ ಸ್ಪೋರ್ಟ್ಸ್ 18
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.