ಬರ್ಮಿಂಗ್‌ಹ್ಯಾಮ್: ಹಿಟ್‌ಮ್ಯಾನ್ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಕಪ್ತಾನ ರೋಹಿತ್ ಶರ್ಮಾ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಪ್ತಾನರಾಗಿ ಸತತ 19ನೇ ಗೆಲುವು ದಾಖಲಿಸಿದ್ದಾರೆ.
ಇದರೊಂದಿಗೆ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ರಿಕಿ ಪಾಂಟಿಂಗ್ ಅವರ ದಾಖಲೆ ಸರಿಗಟ್ಟಲು ಇನ್ನೊಂದು ಗೆಲುವಿನ ಅಗತ್ಯವಿದೆ.
ಇಂದು (ಭಾನುವಾರ) ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಂತಿಮ ಟ್ವೆಂಟಿ-20 ಪಂದ್ಯದಲ್ಲೂ ಗೆಲುವು ದಾಖಲಿಸಿದರೆ ರೋಹಿತ್, ನಾಯಕರಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 20 ಜಯ ಗಳಿಸಿದ್ದ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಶನಿವಾರ ಎಜ್‌ಬಾಸ್ಟನ್‌ನಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತ 49 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಇರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಅಲ್ಲದೆ ಸರಣಿ ಕ್ಲೀನ್‌ಸ್ವೀಪ್ ಮಾಡುವತ್ತ ಗುರಿ ನೆಟ್ಟಿದೆ.
ಕಪ್ತಾನರಾಗಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗೆಲುವಿನ ಓಟ ಮುಂದುವರಿಸಿರುವ ರೋಹಿತ್ ಶರ್ಮಾ, ಸತತ 14ನೇ ಗೆಲುವು ದಾಖಲಿಸಿದ್ದಾರೆ.
ಅಂದ ಹಾಗೆ ರೋಹಿತ್ಗೆಲುವಿನ ಓಟ 2019ರಲ್ಲಿ ಬಾಂಗ್ಲಾದೇಶ ವಿರುದ್ಧದ ಸರಣಿಯೊಂದಿಗೆ ಆರಂಭವಾಗಿತ್ತು.
ಏತನ್ಮಧ್ಯೆ ಇಂಗ್ಲೆಂಡ್ ವಿರುದ್ಧ ಭಾರತ ತಂಡವು ಸತತ ನಾಲ್ಕನೇ ಟ್ವೆಂಟಿ-20 ಸರಣಿ ಗೆಲುವು ದಾಖಲಿಸಿದೆ. ಹಾಗೆಯೇ ವಿರಾಟ್ ಕೊಹ್ಲಿ ಬಳಿಕ ಆಂಗ್ಲರ ನಾಡಿನಲ್ಲಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿ ಗೆದ್ದ ಭಾರತದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.