ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 25 ರನ್ ಅಂತರದ ಗೆಲುವನ್ನು ತನ್ನದಾಗಿಸಿಕೊಂಡಿತು. ಈ ಮೂಲಕ 3:1ರ ಅಂತರದಲ್ಲಿಸ್ಮರಣೀಯ ಸರಣಿ ವಿಜಯ ದಾಖಲಿಸಿದೆ.
ಈ ಗೆಲುವಿನ ಜೊತೆಗೆ ಭಾರತ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ. ಅಲ್ಲದೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದ ಭಾರತೀಯ ಬೌಲರ್‌ಗಳು ಪ್ರಭಾವಿ ದಾಳಿ ಸಂಘಟಿಸಿದರು. ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಇಂಗ್ಲೆಂಡ್ ಇನ್ನಿಂಗ್ಸ್ ಸೋಲಿನ ಮುಖಭಂಗ ಅನುಭವಿಸಿತು.
ಎರಡನೇ ಇನ್ನಿಂಗ್ಸ್‌ನ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಮಿಂಚಿದರು. ಇಬ್ಬರೂ ತಲಾ ಐದೈದು ವಿಕೆಟ್ ಗಳಿಸಿ ಸಂಭ್ರಮಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಕ್ಷರ್ ಪಟೇಲ್ 4 ವಿಕೆಟ್ ತಮ್ಮದಾಗಿಸಿಕೊಂಡಿದ್ದರು.
ರಿಷಭ್ ಪಂತ್ 'ಮ್ಯಾನ್ ಆಫ್‌ದ ಮ್ಯಾಚ್' ಎನಿಸಿದರು, ರವಿಚಂದ್ರ ಅಶ್ವಿನ್ 'ಮ್ಯಾನ್ ಆಫ್ ದ ಸೀರಿಸ್'ಗೆ ಪಾತ್ರರಾದರು.
ಸುಂದರ್ 96*, ಭಾರತ 365ಕ್ಕೆ ಆಲೌಟ್, 160 ರನ್ ಮುನ್ನಡೆ...
ಈ ಮೊದಲು ರಿಷಭ್ ಪಂತ್ (101), ವಾಷಿಂಗ್ಟನ್ ಸುಂದರ್ (ಅಜೇಯ 96) ಹಾಗೂ ರೋಹಿತ್ ಶರ್ಮಾ (49) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 365 ರನ್ ಪೇರಿಸಿತ್ತು. ಈ ಮೂಲಕ 160 ರನ್‌ಗಳ ಬೃಹತ್ ಮುನ್ನಡೆ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
ಮೂರನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದ ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗುಳಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ದೊರಕದೆ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.
ಏಳು ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದ ಭಾರತಕ್ಕೆ ಸುಂದರ್ ಹಾಗೂ ಅಕ್ಷರ್ ಪಟೇಲ್ ನೆರವಾದರು. ನಾಲ್ಕನೇ ದಿನದಾಟದಲ್ಲೂ ಇವರಿಬ್ಬರು ಎದುರಾಳಿಗಳನ್ನು ಕಾಡಿದರು. ಅಲ್ಲದೆ ಎಂಟನೇ ವಿಕೆಟ್‌ಗೆ 106 ರನ್‌ಗಳ ಜೊತೆಯಾಟ ನೀಡಿದರು.
ಈ ನಡುವೆ ಸುಂದರ್ ಜೊತೆಗಿನ ಹೊಂದಾಣಿಕೆ ಕೊರತೆಯಿಂದಾಗಿ ಅಕ್ಷರ್ ಪಟೇಲ್ ರನೌಟ್‌ಗೆ ಬಲಿಯಾದರು. ಅಲ್ಲದೆ ಏಳು ರನ್ ಅಂತರದಿಂದ ಚೊಚ್ಚಲ ಅರ್ಧಶತಕ ಮಿಸ್ ಮಾಡಿಕೊಂಡರು. 97 ಎಸೆತಗಳನ್ನು ಎದುರಿಸಿದ ಅಕ್ಷರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು.
ನಂತರದ ಓವರ್‌ನಲ್ಲೇ ಇಶಾಂತ್ ಶರ್ಮಾ (0) ಹಾಗೂ ಮೊಹಮ್ಮದ್ ಸಿರಾಜ್ (0) ಹೊರದಬ್ಬಿದ ಬೆನ್ ಸ್ಟೋಕ್ಸ್ ಭಾರತದ ಇನ್ನಿಂಗ್ಸ್‌ಗೆ ಇತಿ ಶ್ರೀ ಹಾಡಿದರು. ಇದರೊಂದಿಗೆ ಭಾರತ 114.4 ಓವರ್‌ಗಳಲ್ಲಿ 365 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದನ್ನೂ ಓದಿ:ಗವಾಸ್ಕರ್ ಟೆಸ್ಟ್ ಪದಾರ್ಪಣೆಗೆ 50
ಅತ್ತ 174 ಎಸೆತಗಳನ್ನುಎದುರಿಸಿದ ಸುಂದರ್ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 96 ರನ್ ಗಳಿಸಿ ಅಜೇಯರಾಗುಳಿದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ನಾಲ್ಕು, ಜೇಮ್ಸ್ ಆ್ಯಂಡರ್ಸನ್ ಮೂರು ಮತ್ತು ಜ್ಯಾಕ್ ಲೀಚ್ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಪಂತ್ ಭರ್ಜರಿ ಸೆಂಚುರಿ...
ಈ ಮೊದಲು ಎರಡನೇ ದಿನದಾಟದಲ್ಲಿ ರಿಷಭ್ ಪಂತ್ ಬಾರಿಸಿದ ಆಕರ್ಷಕ ಶತಕದ ಬೆಂಬಲದೊಂದಿಗೆ ಭಾರತ ತಂಡವು ಇನ್ನಿಂಗ್ಸ್ ಮುನ್ನಡೆ ಗಳಿಸುವಲ್ಲಿ ನೆರವಾಯಿತು. ಒಂದು ಹಂತದಲ್ಲಿ ಆರು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಜೊತೆಗೂಡಿದ ಪಂತ್ ಹಾಗೂ ಸುಂದರ್ ಏಳನೇ ವಿಕೆಟ್‌ಗೆ 113 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದ್ದರು. 118 ಎಸೆತಗಳನ್ನು ಎದುರಿಸಿದ್ದ ಪಂತ್ 13 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 101 ರನ್ ಗಳಿಸಿದ್ದರು.
ಭಾರತದ ಬಲಗೈ ಆರಂಭಿಕ ರೋಹಿತ್ ಶರ್ಮಾ ಸಹ 49 ರನ್‌ಗಳ ಉಪಯುಕ್ತ ಕೊಡುಗೆ ನೀಡಿದ್ದರು.
ಇದಕ್ಕೂ ಮೊದಲು ಅಕ್ಷರ್ ಪಟೇಲ್ (4 ವಿಕೆಟ್), ಆರ್. ಅಶ್ವಿನ್ (3 ವಿಕೆಟ್) ಹಾಗೂ ಮೊಹಮ್ಮದ್ ಸಿರಾಜ್ (2 ವಿಕೆಟ್) ದಾಳಿಗೆ ತತ್ತರಿಸಿದ್ದ ಆಂಗ್ಲರ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.