ಅಹಮದಾಬಾದ್: ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ತಮ್ಮನ್ನು ನಿಂದಿಸುತ್ತಿದ್ದರು. ಆಗ ಧಾವಿಸಿದ ನಾಯಕ ವಿರಾಟ್ ಕೊಹ್ಲಿ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದರು ಎಂದು ಭಾರತ ಕ್ರಿಕೆಟ್ ತಂಡದ ಮಧ್ಯಮ ವೇಗಿ ಮೊಹಮ್ಮದ್ ಸಿರಾಜ್ ಹೇಳಿದರು.
ಅಹಮದಾಬಾದ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಮೊದಲ ದಿನದಾಟದಲ್ಲಿ ಘಟನೆ ನಡೆದಿತ್ತು.
ಇಂಗ್ಲೆಂಡ್ 30 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸಿಗಿಳಿದಿದ್ದ ಬೆನ್ ಸ್ಟೋಕ್ಸ್ ಅವರಿಗೆ ಸಿರಾಜ್ ಬೌನ್ಸರ್ ಹಾಕಿದರು. ಆಗ ಕುಪಿತಗೊಂಡ ಸ್ಟೋಕ್ಸ್ ಅವರು ಸಿರಾಜ್ ಅವರನ್ನು ದುರುಗುಟ್ಟಿ ನೋಡಿದರು.
ತಕ್ಷಣ ಸಿರಾಜ್ ಬೆಂಬಲಕ್ಕೆ ಧಾವಿಸಿದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ವಿರುದ್ಧ ವಾಗ್ವಾದಕ್ಕಿಳಿದರು. ಪರಿಣಾಮ ಕೊಹ್ಲಿ-ಸ್ಟೋಕ್ಸ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅಂಪೈರ್ ಮಧ್ಯೆ ಪ್ರವೇಶಿಸಿ ವಾತಾವರಣವನ್ನು ಶಾಂತಗೊಳಿಸಿದರು.
ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿರಾಜ್ 'ಇವೆಲ್ಲವೂ ಆಟದಲ್ಲಿ ಸಾಮಾನ್ಯವಾಗಿ ನಡೆಯುತ್ತವೆ. ಸ್ಟೋಕ್ಸ್ ನನ್ನನ್ನು ನಿಂದಿಸಿದರು. ಈ ವಿಚಾರವನ್ನು ನಾನು ಕೊಹ್ಲಿ ಬಳಿ ಹೇಳಿಕೊಂಡೆ. ಅವರು ಈ ಸಂದರ್ಭವನ್ನು ಉತ್ತಮವಾಗಿ ನಿಭಾಯಿಸಿದರು' ಎಂದು ಹೇಳಿದರು.
ವಿರಾಟ್ ಕೊಹ್ಲಿ ಹಾವಭಾವಗಳನ್ನು ಗಮನಿಸಿರುವ ಅಭಿಮಾನಿಗಳು, 'ವಿಂಟೇಜ್' ಶೈಲಿಗೆ ಮರಳಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ಆಸ್ಟ್ರೇಲಿಯಾ ಸರಣಿಯಲ್ಲಿ ಸಿರಾಜ್ ಜನಾಂಗೀಯ ನಿಂದನೆ ಎದುರಿಸಿದ್ದಾಗ ವಿರಾಟ್ ಕೊಹ್ಲಿ ಅಲ್ಲಿರಬೇಕಿತ್ತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.