ADVERTISEMENT

IND vs ENG: ಕೆ.ಎಲ್‌.ರಾಹುಲ್‌ಗೆ ಪಂದ್ಯ ಶುಲ್ಕದ ಶೇ 15ರಷ್ಟು ದಂಡ

ರಾಯಿಟರ್ಸ್
Published 5 ಸೆಪ್ಟೆಂಬರ್ 2021, 10:11 IST
Last Updated 5 ಸೆಪ್ಟೆಂಬರ್ 2021, 10:11 IST
ಕೆ.ಎಲ್.ರಾಹುಲ್ (ರಾಯಿಟರ್ಸ್‌ ಚಿತ್ರ)
ಕೆ.ಎಲ್.ರಾಹುಲ್ (ರಾಯಿಟರ್ಸ್‌ ಚಿತ್ರ)   

ಲಂಡನ್‌: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್‌ನ ಮೂರನೇ ದಿನದಾಟದ ವೇಳೆ ಅಂಪೈರ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆ.ಎಲ್.ರಾಹುಲ್ ಅವರಿಗೆ ಪಂದ್ಯ ಶುಲ್ಕದ ಶೇ 15ರಷ್ಟು ದಂಡ ವಿಧಿಸಲಾಗಿದೆ.

ಭಾರತದ ದ್ವಿತೀಯ ಇನ್ನಿಂಗ್ಸ್‌ ವೇಳೆಯಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ದಾಳಿಯಲ್ಲಿ ಕೆ.ಎಲ್. ರಾಹುಲ್‌ 46 ರನ್ ಗಳಿಸಿದ್ದಾಗ ಔಟ್ ಆಗಿದ್ದರು. ಇಂಗ್ಲೆಂಡ್ ಆಟಗಾರರ ಮನವಿಯನ್ನು ಫೀಲ್ಡ್ ಅಂಪೈರ್ ಪುರಸ್ಕರಿಸಿರಲಿಲ್ಲ. ಆದರೆ ಡಿಆರ್‌ಎಸ್ ರಿವ್ಯೂ ಮೊರೆ ಹೋಗಲು ಇಂಗ್ಲೆಂಡ್ ತಂಡವು ನಿರ್ಧರಿಸಿತ್ತು. ಬಳಿಕ ರಿವ್ಯೂ ಪರಿಶೀಲಿಸಿದ ಥರ್ಡ್ ಅಂಪೈರ್ ಔಟ್ ತೀರ್ಪು ನೀಡಿದ್ದರು. ಅಂಪೈರ್ ತೀರ್ಪಿನ ವಿರುದ್ಧ ರಾಹುಲ್ ಅಸಮಾಧಾನಗೊಂಡಿದ್ದರು.

ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ನಿರ್ಣಯಕ್ಕೆ ಅಸಮ್ಮತಿ ಸೂಚಿಸುವುದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನಿಯಮಗಳಿಗೆ ವಿರುದ್ಧವಾದದ್ದು. ಹೀಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ದಂಡ ಪಾವತಿಸಲು ರಾಹುಲ್ ಒಪ್ಪಿಕೊಂಡಿರುವ ಕಾರಣ ಈ ಕುರಿತು ಅಧಿಕೃತ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದೂ ಐಸಿಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.