ADVERTISEMENT

IND vs ENG: ವಿರಾಟ್ ಬಳಿಕ ಹಿಟ್‌ಮ್ಯಾನ್ ಟಿ20‌ನಲ್ಲಿ 9,000 ರನ್ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2021, 2:33 IST
Last Updated 19 ಮಾರ್ಚ್ 2021, 2:33 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಅಹಮದಾಬಾದ್: 'ಹಿಟ್‌ಮ್ಯಾನ್' ಖ್ಯಾತಿಯ ಭಾರತದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಟ್ವೆಂಟಿ-20 ಕ್ರಿಕೆಟ್‌ನಲ್ಲಿ 9,000 ರನ್‌ಗಳ ಮೈಲುಗಲ್ಲು ತಲುಪಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ರೋಹಿತ್ ಶರ್ಮಾ ಪಾತ್ರವಾಗಿದ್ದಾರೆ.

ಅಹಮದಾಬಾದ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ನಾಲ್ಕನೇ ಟ್ವೆಂಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಸ್ಮರಣೀಯ ಮೈಲುಗಲ್ಲು ತಲುಪಿದ್ದರು.

ADVERTISEMENT

ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಎಂಟು ರನ್ ಅಂತರದ ರೋಚಕ ಗೆಲುವು ಬಾರಿಸಿರುವ ಟೀಮ್ ಇಂಡಿಯಾ, ಸರಣಿಯನ್ನು ಜೀವಂತವಾಗಿರಿಸಿದೆ. ಇದರೊಂದಿಗೆ ಶನಿವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ವಿಜೇತರ ನಿರ್ಣಯವಾಗಲಿದೆ.

ಹಾಗಿದ್ದರೂ ಪಂದ್ಯದಲ್ಲಿ ವೈಯಕ್ತಿಕವಾಗಿ ರೋಹಿತ್ ಶರ್ಮಾ ವೈಫಲ್ಯ ಅನುಭವಿಸಿದ್ದರು. 17 ಎಸೆತಗಳಲ್ಲಿ ಎರಡು ಬೌಂಡರಿ ನೆರವಿನಿಂದ 12 ರನ್ ಗಳಿಸಲಷ್ಟೇ ಶಕ್ತವಾಗಿದ್ದರು.

ಗೇಲ್ ನಂ.1
ಅಂತರ ರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ ಸೇರಿದಂತೆ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೀರ್ತಿ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಹೆಸರಲ್ಲಿದೆ. ಗೇಲ್ 416 ಟಿ20 ಪಂದ್ಯಗಳಲ್ಲಿ ಒಟ್ಟು 13,270 ರನ್ ಕಲೆ ಹಾಕಿದ್ದಾರೆ.

ಎರಡನೇ ಸ್ಥಾನದಲ್ಲಿರುವ ವೆಸ್ಟ್‌ಇಂಡೀಸ್‌ನ ಕೀರಾನ್ ಪೊಲಾರ್ಡ್ 10,629 ರನ್ ಪೇರಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಕ್ರಮವಾಗಿ ಏಳು ಮತ್ತು ಒಂಬತ್ತನೇ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.