ನವದೆಹಲಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆಯಲಿರುವ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಹಾಲಿ ಚಾಂಪಿಯನ್ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ.
ಈ ನಡುವೆ 1983ರಲ್ಲಿ ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ, ಮಾಜಿ ನಾಯಕ ಕಪಿಲ್ ದೇವ್, ಒಂದು ತಂಡವಾಗಿ ಆಡುವಂತೆ ಟೀಮ್ ಇಂಡಿಯಾ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
'ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಅಥವಾ ಕುಲದೀಪ್ ಯಾದವ್ ಬಗ್ಗೆ ಮಾತ್ರ ಏಕೆ ಮಾತನಾಡಬೇಕು? ಪ್ರತಿಯೊಬ್ಬರಿಗೂ ಪಾತ್ರವಿದೆ. ವಿಶ್ವಕಪ್ ಗೆಲ್ಲುವುದು ಪ್ರತಿಯೊಬ್ಬರ ಕರ್ತವ್ಯ' ಎಂದು ಅವರು ಹೇಳಿದ್ದಾರೆ.
'ಓರ್ವ ಆಟಗಾರನ ವೈಯಕ್ತಿಕ ಪ್ರದರ್ಶನದಲ್ಲಿ ಒಂದು ಪಂದ್ಯವನ್ನು ಗೆಲ್ಲಬಹುದು. ಆದರೆ ಒಂದು ಟೂರ್ನಿ ಗೆಲ್ಲಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಬುಮ್ರಾ ಅಥವಾ ಅರ್ಷದೀಪ್ ಹೀಗೆ ಓರ್ವ ಆಟಗಾರನ ಮೇಲೆ ಮಾತ್ರ ಅವಲಂಬಿತರಾದರೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ವೈಯಕ್ತಿಕ ಸಾಧನೆಗಿಂತಲೂ ಒಂದು ತಂಡವಾಗಿ ಪ್ರದರ್ಶನ ನೀಡುವುದು ಅತಿ ಮುಖ್ಯ. ಪ್ರತಿಯೊಬ್ಬ ಆಟಗಾರನ ಕೊಡುಗೆಯೂ ಮುಖ್ಯ' ಎಂದು ಹೇಳಿದ್ದಾರೆ.
'1983ರಲ್ಲಿ ನನ್ನ ಪ್ರದರ್ಶನದಿಂದ ಮಾತ್ರ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ರೋಜರ್ ಬಿನ್ನಿ, ಮೊಹಿಂದರ್ ಅಮರನಾಥ್, ಕೀರ್ತಿ ಅಜಾದ್, ಯಶ್‌ಪಾಲ್ ಶರ್ಮಾ ಸೇರಿದಂತೆ ಎಲ್ಲರೂ ಮ್ಯಾಚ್ ವಿನ್ನಿಂಗ್ ನಿರ್ವಹಣೆ ನೀಡಿದ್ದರು' ಎಂದು ಕಪಿಲ್ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.