ಧರ್ಮಶಾಲಾ: 'ಪೈಪೋಟಿಯಿಂದ ಕೂಡಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ನನ್ನನ್ನು ಉತ್ತಮ ನಾಯಕನನ್ನಾಗಿ ರೂಪಿಸಿದೆ' ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಬಳಿಕ ಪುಟಿದೆದ್ದ ಭಾರತ, ಸತತ ಮೂರು ಗೆಲುವು ದಾಖಲಿಸಿ 3–1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಅಂತಿಮ ಪಂದ್ಯವು ಧರ್ಮಶಾಲಾದಲ್ಲಿ ಗುರುವಾರ ಆರಂಭವಾಗಲಿದೆ.
5ನೇ ಪಂದ್ಯಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿರುವ ರೋಹಿತ್, 'ನಾಯಕನಾಗಿ ಇದು ನನ್ನ ಪಾಲಿಗೆ ಮಹತ್ವದ ಸರಣಿಯಾಗಿತ್ತು. ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ವಿಭಿನ್ನ ಸವಾಲುಗಳು ನಮಗೆ ಎದುರಾದವು' ಎಂದಿದ್ದಾರೆ.
'ನಾಯಕನಾಗಿ, ಆಟಗಾರರನ್ನು ಬಳಸಿಕೊಳ್ಳುವುದು ಹೇಗೆ ಮತ್ತು ಅದರಲ್ಲೂ ಒತ್ತಡದ ಸಂದರ್ಭಗಳು ಎದುರಾದಾಗ, ಪರಿಸ್ಥಿತಿಗೆ ತಕ್ಕಂತೆ ಪ್ರತಿಕ್ರಿಯಿಸುವುದು ಹೇಗೆ ಎಂಬುದನ್ನು ಕಲಿತಿದ್ದೇನೆ. ಈ ಸರಣಿಯಲ್ಲಿ ತಂಡ ಮುನ್ನಡೆಸಿದ್ದಕ್ಕೆ ಸಂತಸವಿದೆ. ನಾಯಕನಾಗಿ ನಾನು ಹಿನ್ನಡೆ ಅನುಭವಿಸುತ್ತಿದ್ದದ್ದು ಎಲ್ಲಿ ಎಂಬುದನ್ನು ಈ ಟೂರ್ನಿ ಅರ್ಥ ಮಾಡಿಸಿದೆ' ಎಂದು ಹೇಳಿದ್ದಾರೆ.
ಟೀಂ ಇಂಡಿಯಾದ 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿ, ವೈಯಕ್ತಿಕ ಕಾರಣಕ್ಕಾಗಿ ಪ್ರಸ್ತುತ ಸರಣಿಯಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, ವೇಗಿ ಜಸ್‌ಪ್ರಿತ್ ಬೂಮ್ರಾ, ಸ್ಪಿನ್ನರ್‌ಗಳಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜ ತೋರಿದ ಅತ್ಯುತ್ತಮ ಪ್ರದರ್ಶನದಿಂದಾಗಿ ಭಾರತ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.
ಈ ಕುರಿತು ಮಾತನಾಡಿರುವ ರೋಹಿತ್, 'ನಾಯಕತ್ವ ವಹಿಸಿಕೊಂಡಾಗಿನಿಂದಲೂ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಆಡಲು ಆಗಿಲ್ಲ. ಆ ಕಾರಣಕ್ಕೆ ವಿನಾಯಿತಿ ಪಡೆಯಲಾಗದು. ಇರುವ ತಂಡದೊಂದಿಗೆ ಉತ್ತಮ ವಾತಾವರಣ ಕಾಯ್ದುಕೊಂಡು, ಮುಕ್ತವಾಗಿ ಆಡಬೇಕಿದೆ' ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಶ್ರೇಷ್ಠ ನಾಯಕ ಎನಿಸಿರುವ ವಿರಾಟ್ ಕೊಹ್ಲಿ 2022ರಲ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ, ತಂಡದ ಹೊಣೆಯನ್ನು ರೋಹಿತ್ ಹೊತ್ತುಕೊಂಡಿದ್ದಾರೆ. 2023ರಲ್ಲಿ ನಡೆದ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಮುಗ್ಗರಿಸಿದ್ದರೂ, ರೋಹಿತ್ ನಾಯಕತ್ವದಲ್ಲಿ ಆಡಿದ 5 ಟೆಸ್ಟ್ ಸರಣಿಗಳಲ್ಲಿ ಟೀಂ ಇಂಡಿಯಾ ಯಶಸ್ಸು ಸಾಧಿಸಿದೆ.
ಭಾರತ ತಂಡವನ್ನು 15 ಪಂದ್ಯಗಳಲ್ಲಿ ಮುನ್ನಡೆಸಿರುವ ರೋಹಿತ್, 9 ಗೆಲುವು ತಂದುಕೊಟ್ಟಿದ್ದಾರೆ. 4 ಪಂದ್ಯಗಳಲ್ಲಿ ಸೋಲು ಎದುರಾಗಿದ್ದು, ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.