ಅಹಮದಾಬಾದ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸೇಡು ತೀರಿಸಿಕೊಂಡಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಸ್ಟೋಕ್ಸ್ ಹಾಗೂ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈಗ ಎರಡನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಸ್ಟೋಕ್ಸ್ ಮೇಲುಗೈ ಸಾಧಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಐದನೇ ಬಾರಿಗೆ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ಟೆಸ್ಟ್ ವೃತ್ತಿ ಜೀವನದಲ್ಲಿ ನಾಯಕರಾಗಿ ಎಂಟನೇ ಬಾರಿಗೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇದರೊಂದಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕರಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿರುವ ಅಪಖ್ಯಾತಿಗೊಳಗಾಗಿದ್ದಾರೆ.
ಹಾಗೆಯೇ ಟೆಸ್ಟ್ ಸರಣಿಯೊಂದರಲ್ಲಿ ಎರಡನೇ ಬಾರಿಗೆ ಕೊಹ್ಲಿ ಸೊನ್ನೆಗೆ ಔಟಾಗಿದ್ದಾರೆ. ಈ ಹಿಂದೆ 2014ರ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧವೇ ಎರಡು ಬಾರಿ ಜೇಮ್ಸ್ ಆ್ಯಂಡರ್ಸನ್ ದಾಳಿಯಲ್ಲಿ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದ್ದರು. ಪ್ರಸ್ತುತ ಸರಣಿಯಲ್ಲಿ ಮೊಯಿನ್ ಅಲಿ ದಾಳಿಯಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.