ADVERTISEMENT

IND vs ENG: ಆನ್ ಫೀಲ್ಡ್, 3ನೇ ಅಂಪೈರ್ ತೀರ್ಪಿಗೆ ವಿರಾಟ್ ಕೊಹ್ಲಿ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2021, 3:20 IST
Last Updated 19 ಮಾರ್ಚ್ 2021, 3:20 IST
   

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟ್ವೆಂಟಿ-20 ಪಂದ್ಯದಲ್ಲಿ ಮೂರನೇ ಅಂಪೈರ್ ತೀರ್ಪಿಗೆ ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ.

ಸೂರ್ಯ ಕುಮಾರ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್‌ ಅವರನ್ನು ವಿವಾದಾತ್ಮಕ ತೀರ್ಪುಗಳಲ್ಲಿ ಔಟ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿರುವ ವಿರಾಟ್, ಆನ್ ಫೀಲ್ಡ್ ಅಂಪೈರ್‌ ಸಾಫ್ಟ್ ಸಿಗ್ನಲ್‌ನಲ್ಲಿ 'ಔಟ್' ತೀರ್ಪು ನೀಡುವ ಬದಲು 'ಐ ಡೋಂಟ್ನೊ' (ಖಚಿತತೆಯಿಲ್ಲ) ನಿರ್ಣಯ ಏಕೆ ಇರಬಾರದು ಎಂದು ಕೇಳಿದ್ದಾರೆ.

ಆಟಗಾರನಿಗೆ ಖಚಿತತೆ ಇಲ್ಲದಿರುವಾಗ ಆನ್ ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ಔಟ್ ನೀಡಲು ಹೇಗೆ ಸಾಧ್ಯ ಎಂದು ವಿರಾಟ್ ಪ್ರಶ್ನಿಸಿದರು.

ADVERTISEMENT

'ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಕ್ಯಾಚ್ ಹಿಡಿದಾಗ ಖಚಿತತೆಯನ್ನು ಹೊಂದಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಫ್ಟ್ ಸಿಗ್ನಲ್ ಮುಖ್ಯವೆನಿಸುತ್ತದೆ. ಅಂಪೈರ್‌ಗಳು 'ಐಡೋಂಟ್ ನೊ' ನಿರ್ಣಯ ನೀಡಲು ಏಕೆ ಸಾಧ್ಯವಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆಟವನ್ನು ಮುಕ್ತವಾಗಿಡಲು ಇಂತಹ ವಿಷಯಗಳನ್ನು ಕಡೆಗಣಿಸಲು ಬಯಸುತ್ತೀರಿ. ಆದರೆ ಮೈದಾನದಲ್ಲಿ ಹೆಚ್ಚಿನ ಸ್ಪಷ್ಟತೆ ಬೇಕಾಗಿದೆ' ಎಂದು ನಾಲ್ಕನೇ ಟಿ20 ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದರು.

ಮೊದಲು ಸ್ಯಾಮ್ ಕರನ್ ದಾಳಿಯಲ್ಲಿ ಸೂರ್ಯಕುಮಾರ್ ಯಾದವ್ ಹೊಡೆದ ಚೆಂಡನ್ನು ಡೇವಿಡ್ ಮಲನ್ ಕ್ಯಾಚ್ಹಿಡಿದಿರುವುದು ವಿವಾದಕ್ಕೆ ಕಾರಣವಾಗಿತ್ತು. ಒಂದು ಹಂತದಲ್ಲಿ ಚೆಂಡು ನೆಲಕಚ್ಚಿದ್ದು ಸ್ಪಷ್ಟವಾಗಿದೆ. ಆದರೂ ಆನ್ ಫೀಲ್ಡ್ ಅಂಪೈರ್ ಸಾಫ್ಟ್ ಸಿಗ್ನಲ್ ಔಟ್ ನೀಡಿರುವ ಹಿನ್ನೆಲೆಯಲ್ಲಿ ಮೂರನೇ ಅಂಪೈರ್ 'ಔಟ್' ಎಂದು ಘೋಷಿಸಿದ್ದರು. ಇಲ್ಲಿ ನಾಟೌಟ್ ನೀಡಲು 'ನಿರ್ಣಾಯಕ ಪುರಾವೆ' ಇಲ್ಲದ ಕಾರಣ ಥರ್ಡ್ ಅಂಪೈರ್ ಔಟ್ ತೀರ್ಪು ನೀಡಿದ್ದರು.

ಬಳಿಕ ಜೋಫ್ರಾ ಆರ್ಚರ್ ದಾಳಿಯಲ್ಲಿ ವಾಷಿಂಗ್ಟನ್ ಸುಂದರ್ ಹೊಡೆದ ಚೆಂಡನ್ನು ಥರ್ಡ್ ಮ್ಯಾನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆದಿಲ್ ರಶೀದ್ ವಿವಾದಾತ್ಮಕವಾಗಿ ಕ್ಯಾಚ್ ಹಿಡಿದಿದ್ದರು. ರಶೀದ್ ಚೆಂಡು ಹಿಡಿಯುವ ವೇಳೆಗೆ ಕಾಲು ಬೌಂಡರಿ ಗೆರೆಗೆ ಸ್ಪರ್ಶಿಸುತ್ತಿತ್ತು. ಇಲ್ಲೂ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದ್ದರು.

ಇದು ನಾಯಕ ವಿರಾಟ್ ಕೊಹ್ಲಿ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ ತಮ್ಮ ಆಕ್ರೋಶವನ್ನು ಡಗೌಟ್‌ನಿಂದಲೇ ತೋರ್ಪಡಿಸಿದ್ದರು.

ಅಂದ ಹಾಗೆ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಎಂಟು ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದೆ. ಐದನೇ ಹಾಗೂ ಅಂತಿಮ ಪಂದ್ಯ ಶನಿವಾರ ನಡೆಯಲಿದ್ದು, ವಿಜೇತರ ನಿರ್ಣಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.