ಜೈಪುರ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಶುಭಾರಂಭ ಮಾಡಿಕೊಂಡಿದೆ.
ಈ ನಡುವೆ ಭಾರತ ಹಾಗೂ ನ್ಯೂಜಿಲೆಂಡ್ ಆಟಗಾರರ ನಡುವೆ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಪ್ರಮುಖವಾಗಿಯೂ ತಮ್ಮನ್ನು ಕೆಣಕಲು ಬಂದ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್‌ಗೆ ಭಾರತೀಯ ಬೌಲರ್ದೀಪಕ್ ಚಾಹರ್ ಬಿಸಿ ಮುಟ್ಟಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆರು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಮಾರ್ಟಿನ್ ಗಪ್ಟಿಲ್ (70) ಹಾಗೂ ಮಾರ್ಕ್ ಚಾಪ್‌ಮನ್ (63) ಆಕರ್ಷಕ ಅರ್ಧಶತಕಗಳ ನೆರವಿನಿಂದ ಸವಾಲಿನ ಮೊತ್ತ ಪೇರಿಸಲು ನೆರವಾಗಿದ್ದರು.
ಈ ಮಧ್ಯೆ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಗಪ್ಟಿಲ್, ಭಾರತದ ಬೌಲರ್ ದೀಪಕ್ ಚಾಹರ್ ಅವರನ್ನು ದಿಟ್ಟಿಸಿ ನೋಡಿದರು. ಆದರೆ ನಂತರದ ಎಸೆತದಲ್ಲೇ ಗಪ್ಟಿಲ್‌ರನ್ನು ಔಟ್ ಮಾಡಿದ ಚಾಹರ್ ಅದೇ ಧಾಟಿಯಲ್ಲಿ ದಿಟ್ಟಿಸಿ ನೋಡುತ್ತಾ ತಿರುಗೇಟು ನೀಡಿದರು. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಅಂತಿಮವಾಗಿ ಸೂರ್ಯಕುಮಾರ್ ಯಾದವ್ (62) ಹಾಗೂ ನಾಯಕ ರೋಹಿತ್ ಶರ್ಮಾ (48) ಆಕರ್ಷಕ ಆಟದ ನೆರವಿನಿಂದ ಭಾರತ ತಂಡವು ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.