ADVERTISEMENT

46ಕ್ಕೆ ಆಲೌಟ್ ಬೆನ್ನಲ್ಲೇ ಮತ್ತೆ 54 ರನ್ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2024, 12:54 IST
Last Updated 19 ಅಕ್ಟೋಬರ್ 2024, 12:54 IST
<div class="paragraphs"><p>ರಿಷಭ್ ಪಂತ್ ವಿಕೆಟ್ ಪಡೆದ ನ್ಯೂಜಿಲೆಂಡ್ ಆಟಗಾರರು ಸಂಭ್ರಮ</p></div>

ರಿಷಭ್ ಪಂತ್ ವಿಕೆಟ್ ಪಡೆದ ನ್ಯೂಜಿಲೆಂಡ್ ಆಟಗಾರರು ಸಂಭ್ರಮ

   

(ಪಿಟಿಐ ಚಿತ್ರ)

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್ನಿಗೆ ಆಲೌಟ್ ಆಗಿದ್ದ ಟೀಮ್ ಇಂಡಿಯಾ ಭಾರಿ ಮುಖಭಂಗಕ್ಕೊಳಗಾಗಿತ್ತು.

ADVERTISEMENT

ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ತೋರಿರುವ ಹೊರತಾಗಿಯೂ ಕೊನೆಯ ಏಳು ವಿಕೆಟ್‌ಗಳನ್ನು 54 ರನ್ ಅಂತರದಲ್ಲಿ ಕಳೆದುಕೊಂಡಿರುವುದು ಭಾರಿ ಹಿನ್ನೆಡೆಗೆ ಕಾರಣವಾಗಿದೆ.

ಇದರಿಂದಾಗಿ ಪಂದ್ಯ ಸೋಲುವ ಭೀತಿ ಕಾಡುತ್ತಿದೆ. ಮತ್ತೊಂದೆಡೆ ನ್ಯೂಜಿಲೆಂಡ್ 36 ವರ್ಷಗಳ ಬಳಿಕ ಭಾರತ ನೆಲದಲ್ಲ ಟೆಸ್ಟ್ ಪಂದ್ಯ ಗೆಲುವಿನ ಹುಮ್ಮಸ್ಸಿನಲ್ಲಿದೆ.

ಭಾನುವಾರ ಅಂತಿಮ ದಿನದಾಟದಲ್ಲಿ ನ್ಯೂಜಿಲೆಂಡ್ ಗೆಲುವಿಗೀಗ 107 ರನ್‌ಗಳ ಅವಶ್ಯಕತೆಯಿದ್ದು, ಎಲ್ಲ 10 ವಿಕೆಟ್ ಬಾಕಿ ಇದೆ.

ನಾಲ್ಕನೇ ದಿನದಾಟವಾದ ಇಂದು (ಶನಿವಾರ) ಭಾರತದ ಪರ ಸರ್ಫರಾಜ್ ಖಾನ್ ಹಾಗೂ ರಿಷಭ್ ಪಂತ್ ದಿಟ್ಟ ಹೋರಾಟ ಪ್ರದರ್ಶಿಸಿದರು.

ಸರ್ಫರಾಜ್ ಖಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದರೆ ಪಂತ್ ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು.

ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 177 ರನ್‌ಗಳ ಜೊತೆಯಾಟ ಕಟ್ಟಿದರು. ಒಂದು ಹಂತದಲ್ಲಿ ಭಾರತ 84 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 408 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ 52 ರನ್‌ಗಳ ಮುನ್ನಡೆ ಗಳಿಸಿತ್ತಲ್ಲದೆ ಏಳು ವಿಕೆಟ್ ಬತ್ತಳಿಕೆಯಲ್ಲಿತ್ತು.

ನ್ಯೂಜಿಲೆಂಡ್ ಆಟಗಾರರ ಸಂಭ್ರಮ

ಆದರೆ ನ್ಯೂಜಿಲೆಂಡ್ ಹೊಸ ಚೆಂಡು ಪಡೆದ ಕೂಡಲೇ ಕೊನೆಯ ಏಳು ವಿಕೆಟ್‌ಗಳನ್ನು 54 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಭಾರತ 462 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸರ್ಫರಾಜ್ ಖಾನ್ 150 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೇ ರಿಷಭ್ ಪಂತ್ 99 ರನ್ ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಕೆ.ಎಲ್. ರಾಹುಲ್ (12), ರವೀಂದ್ರ ಜಡೇಜ (5), ಆರ್. ಅಶ್ವಿನ್ (15), ಜಸ್‌ಪ್ರೀತ್ ಬೂಮ್ರಾ (0), ಮೊಹಮ್ಮದ್ ಸಿರಾಜ್ (0) ವೈಫಲ್ಯ ಅನುಭವಿಸಿದರು. ಕುಲದೀಪ್ ಯಾದವ್ 6 ರನ್ ಗಳಿಸಿ ಔಟಾಗದೆ ಉಳಿದರು.

ಹೊಸ ಚೆಂಡಿನಲ್ಲಿ ಭಾರತೀಯ ಬ್ಯಾಟರ್‌ಗಳನ್ನು ಮಗದೊಮ್ಮೆ ಕಾಡಿದ ಕಿವೀಸ್ ವೇಗಿಗಳಾದ ವಿಲಿಯಮ್ ಓರೂರ್ಕಿ ಹಾಗೂ ಮ್ಯಾಟ್ ಹೆನ್ರಿ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು. ಎಜಾಜ್ ಪಟೇಲ್ ಎರಡು ಮತ್ತು ಟಿಮ್ ಸೌಥಿ ಹಾಗೂ ಗ್ಲೆನ್ ಪಿಲಿಪ್ಸ್ ತಲಾ ಒಂದು ವಿಕೆಟ್ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಮ್ಯಾಟ್ ಹೆನ್ರಿ (15ಕ್ಕೆ 5 ವಿಕೆಟ್) ಹಾಗೂ ವಿಲಿಯಮ್ ಓರೂರ್ಕಿ (22ಕ್ಕೆ 4 ವಿಕೆಟ್) ದಾಳಿಗೆ ತತ್ತರಿಸಿದ್ದ ಭಾರತ ಕೇವಲ 46 ರನ್ನಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದಿಂದ ದಾಖಲಾದ ಮೂರನೇ ಕನಿಷ್ಠ ಮೊತ್ತವಾಗಿದೆ.

ಬಳಿಕ ರಚಿನ್ ರವೀಂದ್ರ (134) ಶತಕ ಮತ್ತು ಡೆವೊನ್ ಕಾನ್ವೆ (91) ಹಾಗೂ ಟಿಮ್ ಸೌಥಿ (65) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 402 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಆ ಮೂಲಕ 356 ರನ್‌ಗಳ ಮುನ್ನಡೆ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.