ಪುಣೆ: ‘12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಸೋತಿರಬಹುದು. ಆದರೆ, ಆತಂಕ ಪಡುವ ಅಗತ್ಯವಿಲ್ಲ. ನಾವು ನಮ್ಮ ಆಟ ಸುಧಾರಿಸಿಕೊಳ್ಳುವ ಕಡೆಗೆ ಗಮನ ಹರಿಸುತ್ತೇವೆ’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.
‘ಈ ಸೋಲಿನ ಕುರಿತು ಅತಿಯಾಗಿ ಪ್ರತಿಕ್ರಿಯಿಸುವುದಿಲ್ಲ. ನಾವು ನಿರ್ದಿಷ್ಟ ಆಟಗಾರರೊಂದಿಗೆ ಚರ್ಚಿಸಬೇಕಿದೆ. ತಂಡವಾಗಿ ನಾವು ಅವರಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡುತ್ತೇವೆ’ ಎಂದು ಪಂದ್ಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘12 ವರ್ಷಗಳಿಂದ ನಾವು ಗೆಲುವಿನ ಓಟದಲ್ಲಿದ್ದೆವು. ಆ ಅವಧಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ನಾವು ವಿಭಿನ್ನವಾಗಿ ಮಾತನಾಡುವ, ಭಿನ್ನವಾಗಿ ಏನಾದರೂ ಮಾಡುವ ಅಗತ್ಯವಿಲ್ಲ. ಇದೇ ತಂಡವು ಈ ಹಿಂದೆ ಸಾಕಷ್ಟು ಉತ್ತಮ ಫಲಿತಾಂಶ ನೀಡಿದೆ’ ಎಂದರು.
‘ಇಂದಿನ ಸೋಲಿಗೆ ಯಾರೊಬ್ಬರನ್ನು ಹೊಣೆ ಮಾಡುವುದಿಲ್ಲ. ಇದು ತಂಡದ ಸೋಲು. ಇಲ್ಲಿ ಬ್ಯಾಟಿಂಗ್ ವೈಫಲ್ಯ ಅಥವಾ ಬೌಲಿಂಗ್ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ವಾಂಖೆಡೆಯಲ್ಲಿ ನಡೆಯುವ ಮುಂದಿನ ಟೆಸ್ಟ್ ಪಂದ್ಯ ಗೆಲ್ಲಲು ನಾವು ಯೋಜನೆ ರೂಪಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.