ಮುಂಬೈ: ರವಿಚಂದ್ರನ್ ಅಶ್ವಿನ್ (8ಕ್ಕೆ 4) ಹಾಗೂ ಮೊಹಮ್ಮದ್ ಸಿರಾಜ್ (19ಕ್ಕೆ 3) ದಾಳಿಗೆ ಸಿಲುಕಿರುವ ಪ್ರವಾಸಿ ನ್ಯೂಜಿಲೆಂಡ್ ತಂಡವು ಭಾರತ ವಿರುದ್ಧ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕೇವಲ 62 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ಈ ಮೂಲಕ ವಿರಾಟ್ ಕೊಹ್ಲಿ ಬಳಗವು ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್‌ಗಳ ಬೃಹತ್ ಮುನ್ನಡೆ ಗಳಿಸಿದೆ. ಇದರಿಂದಾಗಿ ನ್ಯೂಜಿಲೆಂಡ್ ಮೇಲೆ ಫಾಲೋಆನ್ ಹೇರುವ ಅವಕಾಶವಿದ್ದರೂ ಅದಕ್ಕೆ ಮನಸ್ಸು ಮಾಡದೆಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಲು ನಾಯಕ ಕೊಹ್ಲಿ ನಿರ್ಧರಿಸಿದರು.
ಈ ಮೂದಲು ಎಜಾಜ್ ಪಟೇಲ್ ಐತಿಹಾಸಿಕ 10 ವಿಕೆಟ್ ಸಾಧನೆ ನೆರವಿನಿಂದಾಗಿ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲೌಟ್ ಆಯಿತು.
ಮೊದಲ ದಿನದಲ್ಲೇ ಶತಕ ಸಾಧನೆ ಮಾಡಿದ್ದ ಮಯಂಕ್ ಅಗರವಾಲ್ 150 ರನ್ ಗಳಿಸಿ ಗಮನ ಸೆಳೆದರು. ಕೆಳ ಕ್ರಮಾಂಕದಲ್ಲಿ ಅವರಿಗೆ ತಕ್ಕ ಸಾಥ್ ನೀಡಿದ ಅಕ್ಷರ್ ಪಟೇಲ್ ಚೊಚ್ಚಲ ಅರ್ಧಶತಕ (52) ಸಾಧನೆ ಮಾಡಿದರು. ನ್ಯೂಜಿಲೆಂಡ್ ಪರ ಎಜಾಜ್ ಪಟೇಲ್ 119 ರನ್ ತೆತ್ತು ಎಲ್ಲ 10 ವಿಕೆಟ್ ಕಬಳಿಸಿದರು. ಈ ಮೂಲಕ ಮಾಜಿ ಬೌಲರ್‌ಗಳಾದ ಇಂಗ್ಲೆಂಡ್‌ನ ಜಿಮ್ ಲೇಕರ್ ಹಾಗೂ ಅನಿಲ್ ಕುಂಬ್ಳೆ ಸಾಧನೆಯನ್ನು ಸರಿಗಟ್ಟಿದರು.
ಕಿವೀಸ್ ಪರ ನಾಯಕ ಲಾಥಮ್ (10) ಹಾಗೂ ಕೈಲ್ ಜೇಮಿಸನ್ (17) ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್ ಎರಡಂಕಿಯನ್ನು ತಲುಪಲಿಲ್ಲ. ಭಾರತದ ಪರ ಅಶ್ವಿನ್ ಕೇವಲ 8 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು. ಮೊಹಮ್ಮದ್ ಸಿರಾಜ್ ಮೂರು ಹಾಗೂ ಜಯಂತ್ ಯಾದವ್ ಒಂದು ವಿಕೆಟ್ ಕಬಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.