ಪುಣೆ: ಗುರುವಾರ ಮಧ್ಯಾಹ್ನ ಚಹಾ ವಿರಾಮಕ್ಕೆ ಇನ್ನೂ ಮೂರು ಓವರ್‌ಗಳು ಮಾತ್ರ ಬಾಕಿಯಿದ್ದಾಗ ವಾಷಿಂಗ್ಟನ್ ಸುಂದರ್ ಮೂಲಕ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಜೊತೆಯಾಟ ಮುರಿದರು. ನ್ಯೂಜಿಲೆಂಡ್ ತಂಡದ ಜೋಡಿಯು ನಾಲ್ಕನೇ ವಿಕೆಟ್‌ಗೆ 59 ರನ್ ಗಳಿಸಿತ್ತು.
ಆಗ ತಂಡದ ಮೊತ್ತ 197 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 197 ರನ್‌ಗಳಾಗಿದ್ದವು. ಇನಿಂಗ್ಸ್ ಕಿವೀಸ್ ಪಡೆಯ ಹಿಡಿತದಲ್ಲಿತ್ತು. ಅಲ್ಲಿಯವರೆಗೂ ವಾಷಿಂಗ್ಟನ್ 13 ಓವರ್ ಹಾಕಿದ್ದರು. ಈ ಓವರ್‌ಗಳಲ್ಲಿ ಬ್ಯಾಟರ್‌ಗಳಿಗೆ ಆತಂಕ ಮೂಡಿಸುವಂತಹ ಎಸೆತಗಳು ಹೆಚ್ಚೇನೂ ಇರಲಿಲ್ಲ. ಆದರೆ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮಾತ್ರ ಈ ಅವಧಿಯಲ್ಲಿ 3 ವಿಕೆಟ್ ಗಳಿಸಿ ತಮ್ಮ ಕೈಚಳಕ ಮೆರೆದಿದ್ದರು.
ಆದರೆ ನಾಟಕೀಯ ತಿರುವು ಪಡೆದ ಇನಿಂಗ್ಸ್‌ನಲ್ಲಿ ವಾಷಿಂಗ್ಟನ್ ತಮ್ಮ ಜೀವನಶ್ರೇಷ್ಠ (23.1–4–59–7) ಬೌಲಿಂಗ್ ಸಾಧನೆ ಮಾಡಿದರು. ಉಳಿದಿದ್ದ ಎಲ್ಲ ವಿಕೆಟ್‌ಗಳನ್ನೂ ಕಬಳಿಸಿ ಕಿವೀಸ್ ಇನಿಂಗ್ಸ್‌ಗೆ ತೆರೆಯೆಳೆದರು. ಫೀಲ್ಡಿಂಗ್ ಮಾಡುತ್ತಿದ್ದ ಅಶ್ವಿನ್ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ತಮಿಳುನಾಡಿನ ಈ ಜೋಡಿಯು (ಅಶ್ವಿನ್–ವಾಷಿಂಗ್ಟನ್) ಕಿವೀಸ್ ತಂಡದ ಎಲ್ಲ ವಿಕೆಟ್‌ಗಳನ್ನೂ ತಮ್ಮಲ್ಲಿ ಹಂಚಿಕೊಂಡರು. ಪ್ರವಾಸಿ ಬಳಗವು 79.1 ಓವರ್‌ಗಳಲ್ಲಿ 259 ರನ್ ಗಳಿಸಿ ಇನಿಂಗ್ಸ್ ಮುಗಿಸಿತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅದೃಷ್ಟ ಹೇಗೆ ಅದಲು–ಬದಲಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು.
ಈ ಮುಂಚೆ ಕಿವೀಸ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆ ಮಾಡಿದ್ದ ತಂಡದಲ್ಲಿ ವಾಷಿಂಗ್ಟನ್ ಇರಲೇ ಇಲ್ಲ. ಅವರು ತಮಿಳುನಾಡು ತಂಡದಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದರು. ಬೆಂಗಳೂರು ಟೆಸ್ಟ್ ನಂತರ ವಾಷಿಂಗ್ಟನ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಗುರುವಾರ ಬೆಳಿಗ್ಗೆ ಅವರು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಬದಲಿಗೆ ಸ್ಥಾನ ಪಡೆಯುವ ಬಗ್ಗೆ ಯಾರೂ ಯೋಚಿಸಿರಲಿಲ್ಲ. ಅಕ್ಷರ್ ಪಟೇಲ್ ಅವರನ್ನೂ ಪರಿಗಣಿಸದ ತಂಡದ ಮ್ಯಾನೇಜ್‌ಮೆಂಟ್ ಮೂರನೇ ಸ್ಪಿನ್ನರ್ ಸ್ಥಾನಕ್ಕೆ ವಾಷಿಂಗ್ಟನ್ ಅವರನ್ನು ಇಳಿಸಿತು. ಇದು ಉತ್ತಮ ನಡೆಯಾಗಿ ಸಾಬೀತಾಯಿತು.
ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ನಾಯಕ ರೋಹಿತ್ ಅವರು ವಾಷಿಂಗ್ಟನ್‌ಗೆ ಚೆಂಡು ನೀಡಿದರು. ರವೀಂದ್ರ ಜಡೇಜ ಮತ್ತು ಆರ್. ಅಶ್ವಿನ್ ಅವರೊಡಗೂಡಿ ವಾಷಿಂಗ್ಟನ್ ಬ್ಯಾಟರ್‌ಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರು.
ಆದರೆ ಅರ್ಧಶತಕ ಗಳಿಸಿದ್ದ ‘ಬೆಂಗಳೂರು ಮೂಲದ ಹುಡುಗ’ ರಚಿನ್ ರವೀಂದ್ರ (65; 105ಎ, 4X5, 6X1) ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ವಾಷಿಂಗ್ಟನ್ ಬೇಟೆ ಆರಂಭಿಸಿದರು. ಅವರು ಹಾಕಿದ ಆಫ್‌ಬ್ರೇಕ್ ಎಸೆತವು ಮಧ್ಯದ ಸ್ಟಂಪ್ ಲೈನ್‌ನಲ್ಲಿ ಪುಟಿದು ತಿರುವು ಪಡೆಯಿತು. ರಚಿನ್ ಬ್ಯಾಟ್ ಮುಂದೆ ತರುವಷ್ಟರಲ್ಲಿಯೇ ಚೆಂಡು ಆಫ್‌ಸ್ಟಂಪ್‌ಗೆ ಬಡಿಯಿತು. ನುರಿತ ಆಫ್‌ಸ್ಪಿನ್ನರ್ ಅಶ್ವಿನ್ ಅವರ ಎಸೆತದಷ್ಟೇ ಪರಿಣಾಮಕಾರಿ ಸ್ಪಿನ್ ಅದಾಗಿತ್ತು.
ಇಲ್ಲಿಂದ ವಾಷಿಂಗ್ಟನ್ ಬೇಟೆ ಆರಂಭವಾಯಿತು. ನಂತರ ಅವರು ಹಾಕಿದ ಹತ್ತು ಓವರ್‌ಗಳಲ್ಲಿ ಅವರು ಉಳಿದ 6 ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಅದರಲ್ಲಿ ಮಿಚೆಲ್ ಸ್ಯಾಂಟನರ್ ಮಾತ್ರ 33 ರನ್ ಗಳಿಸಿದರು. ಉಳಿದವರು ಎರಡಂಕಿ ಮುಟ್ಟಲಿಲ್ಲ. ವಾಷಿಂಗ್ಟನ್ ಅವರು ಇನಿಂಗ್ಸ್ ಶ್ರೇಷ್ಠ ವಿಕೆಟ್ ಗಳಿಕೆ ಸಾಧನೆಯಲ್ಲಿ ಅಶ್ವಿನ್ ಅವರನ್ನು ಸರಿಗಟ್ಟಿದರು.
ರೋಹಿತ್ ಶೂನ್ಯ: ಆತಿಥೇಯ ತಂಡವು ಮೊದಲ ಇನಿಂಗ್ಸ್‌ನ ಆರಂಭದಲ್ಲಿಯೇ ಆಘಾತ ಅನುಭವಿಸಿತು.
3ನೇ ಓವರ್‌ನಲ್ಲಿ ಟೀಮ್ ಸೌಥಿ ಎಸೆತದಲ್ಲಿ ರೋಹಿತ್ ಶರ್ಮಾ ಕ್ಲೀನ್ ಬೌಲ್ಡ್ ಆದರು. ಇನ್ನೊಂದು ಬದಿಯಲ್ಲಿದ್ದ ಯಶಸ್ವಿ ಜೈಸ್ವಾಲ್ (ಬ್ಯಾಟಿಂಗ್ 6) ಮತ್ತು ಶುಭಮನ್ ಗಿಲ್ (ಬ್ಯಾಟಿಂಗ್ 10) ಅವರ ತಾಳ್ಮೆಯ ಆಟದಿಂದ ತಂಡವು ದಿನದಾಟದ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಗಳಿಸಿತು.
ಐದು ಕ್ಲೀನ್‌ಬೌಲ್ಡ್..!
ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್‌ನಲ್ಲಿ ಔಟಾದ ಏಳು ಮಂದಿಯಲ್ಲಿ ಐವರು ಕ್ಲೀನ್ ಬೌಲ್ಡ್ ಆದರು. ಉಳಿದಂತೆ ಡ್ಯಾರಿಲ್ ಮಿಚೆಲ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಗ್ಲೆನ್ ಫಿಲಿಪ್ಸ್ ಅವರ ಕ್ಯಾಚ್ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾದರು. ಅಶ್ವಿನ್ ಪಡೆದ ಮೂರು ವಿಕೆಟ್‌ಗಳಲ್ಲಿ ಟಾಮ್ ಲೇಥಮ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಡೆವೊನ್ ಕಾನ್ವೆ (76; 141ಎ) ಮತ್ತು ವಿಲ್ ಯಂಗ್ ಕ್ಯಾಚ್‌ಗಳನ್ನು ವಿಕೆಟ್‌ಕೀಪರ ರಿಷಭ್ ಪಂತ್ ಪಡೆದರು. ಪಂತ್ ಅವರು ಯಂಗ್ ಕ್ಯಾಚ್ ಪಡೆದಾಗ ಅಂಪೈರ್ ಔಟ್ ನೀಡಿರಲಿಲ್ಲ. ಆದರೆ ಶಾರ್ಟ್ ಲೆಗ್‌ನಲ್ಲಿದ್ದ ಸರ್ಫರಾಜ್ ಬಲವಾಗಿ ಅಪೀಲ್ ಮಾಡಿದರು. ನಾಯಕ ರೋಹಿತ್ ಅವರನ್ನು ಯುಡಿಆರ್‌ಎಸ್ (ಅಂಪೈರ್ ತೀರ್ಪುಮರುಪರಿಶೀಲನಾ ವ್ಯವಸ್ಥೆ) ಅವಕಾಶ ಪಡೆಯಲು ಒತ್ತಾಯಿಸಿದರು. ರೋಹಿತ್ ಕಡೆಗೂ ಒಪ್ಪಿ ಅವಕಾಶ ಬಳಸಿಕೊಂಡರು. ಸಿಹಿ ಫಲ ಲಭಿಸಿತು. ರಾಹುಲ್ ಸಿರಾಜ್‌ಗೆ ವಿಶ್ರಾಂತಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಯಿತು. ಶುಭಮನ್ ಗಿಲ್ ಮತ್ತು ಆಕಾಶ್ ದೀಪ್ ಅವರನ್ನು ಕಣಕ್ಕಿಳಿಸಲಾಯಿತು. ರಾಹುಲ್ ಅವರು ಕಳೆದ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಮೊದಲ ಪಂದ್ಯದಲ್ಲಿ ಗಿಲ್ ಗಾಯದ ಕಾರಣ ಆಡಿರಲಿಲ್ಲ. ಅವರು ಚೇತರಿಸಿಕೊಂಡಿದ್ದು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕುಡಿಯುವ ನೀರು ಸಿಗದೇ ಸುಸ್ತಾದ ಪ್ರೇಕ್ಷಕರು
ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಪ್ರೇಕ್ಷಕರಿಗೆ ಕುಡಿಯುವ ನೀರು ಲಭಿಸದೇ ಅಸ್ವಸ್ಥರಾದ ಘಟನೆ ನಡೆದಿದೆ. ಕ್ರೀಡಾಂಗಣದಲ್ಲಿ ಡಿಪಿಯು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಏಳು ಪ್ರಥಮ ಚಿಕಿತ್ಸೆ ಕೌಂಟರ್‌ಗಳನ್ನು ಹಾಕಿದೆ. ನಿರ್ಜಲೀಕರಣದಿಂದ ಸುಸ್ತಾದ ಸುಮಾರು 150 ಮಂದಿಯು ಈ ಚಿಕಿತ್ಸಾ ಕೇಂದ್ರಗಳಲ್ಲಿ ಆರೈಕೆ ಪಡೆದರು ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಪಂದ್ಯ ಆರಂಭವಾದ ನಂತರ ನಾಲ್ಕು ತಾಸುಗಳವರೆಗೆ ಕುಡಿಯುವ ನೀರು ಲಭ್ಯವಾಗಿರಲಿಲ್ಲ. ಪುಣೆಯಲ್ಲಿ ಗುರುವಾರ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಮೂರನೇ ಒಂದರಷ್ಟು ಭಾಗ ಮಾತ್ರ ಮೇಲ್ಛಾವಣಿ ಹೊಂದಿದೆ. ಇದರಿಂದಾಗಿ ಬಹುತೇಕ ಪ್ರೇಕ್ಷಕರು ಇಡೀ ದಿನ ಬಿಸಿಲಿನಲ್ಲಿ ಕುಳಿತು ಪಂದ್ಯ ವೀಕ್ಷಿಸಬೇಕಾಯಿತು. ತಾಪದಿಂದ ರಕ್ಷಿಸಿಕೊಳ್ಳಲು ಬಹುತೇಕರು ತಲೆಗೆ ಬಟ್ಟೆ ಸುತ್ತಿಕೊಂಡರು. ಇನ್ನೂ ಕೆಲವರು ಕ್ಯಾಪ್ ಹಾಕಿಕೊಂಡಿದ್ದರು. ಊಟದ ವಿರಾಮದ ಸಂದರ್ಭದಲ್ಲಿ ಜನರು ಉಚಿತ ನೀರಿನ ಕಿಯಾಸ್ಕ್ ಸಮೀಪ ಸಾಲುಗಟ್ಟಿದ್ದರು. ಟಿಕೆಟ್ ಖರೀದಿಸಿ ಬಂದವರಿಗೆ ಆಯೋಜಕರು ಉಚಿತವಾಗಿ ನೀರಿನ ವ್ಯವಸ್ಥೆ ಮಾಡಿದ ಕಿಯಾಸ್ಕ್‌ಗಳಿವು. ಆದರೆ ಇಲ್ಲಿ ನೀರು ಇರಲಿಲ್ಲ. ‘ನೀರಿನ ಬಾಟಲಿಗಾಗಿ ಅವರಿಗೆ ದುಡ್ಡು (₹ 150 ಪ್ರತಿ ಬಾಟಲಿಗೆ) ಕಳಿಸಿದ್ದೇವೆ. ಆದರೆ ಇಲ್ಲಿ ಒಂದೂ ಬಾಟಲಿ ಇಲ್ಲ’ ಎಂದು ಪಿಂಪ್ರಿ ಚಿಂಚವಾಡದಿಂದ ಬಂದಿದ್ದ ಕ್ರಿಕೆಟ್ ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ‘ಉಚಿತ ನೀರು ಬಿಡಿ ದುಡ್ಡು ಕೊಟ್ಟರೂ ನೀರು ಸಿಗುತ್ತಿಲ್ಲ. ಆರು ಬಾಟಲಿಗಳಿಗಾಗಿ ನಾವು ₹ 1200 ಕೊಟ್ಟಿದ್ದೇವೆ. ತಂಪು ಪಾನೀಯದ ಬೆಲಯು ಇಲ್ಲಿ ₹ 400 ಇದೆ. ಆದ್ದರಿಂದ ಇಲ್ಲಿ ಊಟ ಮಾಡದಿರಲು ನಿರ್ಧರಿಸಿದ್ದೇವೆ’ ಎಂದೂ ಅವರು ಹೇಳಿದರು. ನೂಕುನುಗ್ಗಲು ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದರು.
‘ಈ ತರಹದ ವ್ಯವಸ್ಥೆಯು ಅಸಹನೀಯವಾಗಿದೆ. ಆದರೆ ಏನು ಮಾಡುವುದು? ನಾವು ಕ್ರಿಕೆಟ್ ಅನ್ನು ಪ್ರೀತಿಸುವವರು. ನೇರವಾಗಿ ನೋಡಿ ಆನಂದಿಸಲು ಬಂದಿದ್ದೇವೆ. ಮುಂದೆಯೂ ನಮ್ಮಲ್ಲಿ ಹಲವರು ಮತ್ತೆ ಬರುತ್ತಲೇ ಇರುತ್ತೇವೆ. ಇಂತಹ ಅವ್ಯವಸ್ಥೆ ಇದ್ದರೂ ಮತ್ತೆ ಬರುತ್ತಲೇ ಇರುತ್ತೇವೆ’ ಎಂದು ವ್ಯಂಗ್ಯವಾಗಿ ಹೇಳಿದರು. ‘ಜನರಿಗೆ ನಾವು ಉಚಿತವಾಗಿ ತಂಪು ನೀರು ನೀಡಲು ನಲ್ಲಿಗಳ ವ್ಯವಸ್ಥೆ ಮಾಡಲು ಯೋಜಿಸಿದ್ದೆವು. ಆದರೆ 15 ಜಾಗಗಳಲ್ಲಿ ಇಂತಹ ವ್ಯವಸ್ಥೆ ಮಾಡಲು ನೀರಿನ ಟ್ಯಾಂಕ್ ಸಾಮರ್ಥ್ಯ ಕಡಿಮೆಯಿತ್ತು. ಆದ್ದರಿಂದ ಬಾಟಲ್‌ಗಳನ್ನು ಹಂಚಲು ನಿರ್ಧರಿಸಿದ್ದೆವು. ಇಲ್ಲಿಗೆ ನೀರು ತರಬೇಕಿದ್ದ ಕೆಲವು ಟ್ಯಾಂಕರ್‌ಗಳು ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ಕಾರಣ ವಿಳಂಬವಾಗಿದೆ. ದುಡ್ಡು ತೆಗೆದುಕೊಂಡು ನೀರು ಕೊಡುತ್ತಿಲ್ಲ. ಈ ದೂರಿನ ಬಗ್ಗೆ ವಿಚಾರಣೆ ನಡೆಸುತ್ತೇವೆ’ ಎಂದು ಎಂ.ಸಿ.ಎ. ಕಾರ್ಯದರ್ಶಿ ಕಮಲೇಶ್ ಪಿಸಾಳ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈಚೆಗೆ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಸರಣಿಯ ಮೊದಲ ಟೆಸ್ಟ್ ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ತೊಂದರೆಗೊಳಗಾಗಿದ್ದನ್ನು ‘ಪ್ರಜಾವಾಣಿ’ ವರದಿ ಮಾಡಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.