ಮುಂಬೈ: ಅನುಭವಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್ ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡವು, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.
ಪಂದ್ಯವು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ 28 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ, ಸಂಘಟಿತ ಬೌಲಿಂಗ್ ಪ್ರದರ್ಶನದ ಮೂಲಕ ಕಾಡಿತು.
ಮಧ್ಯಮ ವೇಗಿ ಆಕಾಶ್ ದೀಪ್, ಎದುರಾಳಿ ಪಡೆಯ ನಾಯಕ ಟಾಮ್ ಲೇಥಮ್ (1) ಅವರನ್ನು ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಅಟ್ಟಿದರು. ಅವರೊಂದಿಗೆ ಕ್ರೀಸ್‌ಗೆ ಇಳಿದಿದ್ದ ಡೆವೋನ್ ಕಾನ್ವೆ (22) ಅವರನ್ನು ವಾಷಿಂಗ್ಟನ್ ಸುಂದರ್ 13ನೇ ಓವರ್‌ನಲ್ಲಿ ಔಟ್ ಮಾಡಿದರು.
ಬಳಿಕ, ಅಶ್ವಿನ್ ಹಾಗೂ ಜಡೇಜ ಮೋಡಿ ಮಾಡಿದರು. ಪ್ರವಾಸಿ ಪಡೆಯ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ಕೊಟ್ಟ ಈ ಜೋಡಿ, ಸತತ ಏಳು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ, ಕ್ರೀಸ್‌ಗೆ ಅಂಟಿಕೊಂಡು ಆಡಿದ ವಿಲ್ ಯಂಗ್ (51) ಅರ್ಧಶತಕ ಗಳಿಸಿದರು. ಅವರ ಆಟದ ಬಲದಿಂದ ಲೇಥಮ್ ಪಡೆ 2ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ಗಳನ್ನು ಕಳೆದುಕೊಂಡು 171 ರನ್ ಗಳಿಸಿದ್ದು, 143 ರನ್‌ಗಳ ಮುನ್ನಡೆ ಸಾಧಿಸಿದೆ.
ಇನ್ನೂ ಮೂರು ದಿನಗಳ ಆಟ ಬಾಕಿ ಇದ್ದು, ನಾಳೆಯೇ ಫಲಿತಾಂಶ ಬರುವ ಸಾಧ್ಯತೆ ಇದೆ.
ಭಾರತದ ಇನಿಂಗ್ಸ್ ಗಿಲ್–ಪಂತ್ ಬಲ
ಪಂದ್ಯದ ಮೊದಲ ದಿನವೇ (ಶುಕ್ರವಾರ) 14 ವಿಕೆಟ್ ಪತನ ಗೊಂಡಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್, 235 ರನ್ ಗಳಿಸಿ ಆಲೌಟ್ ಆಗಿತ್ತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಭಾರತ, 17 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು.
ಆದರೆ, ನಂತರದ 2 ಓವರ್‌ಗಳಲ್ಲಿ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ಅನುಭವಿ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಮೂವರು ಔಟಾಗಿದ್ದರು. ಹೀಗಾಗಿ, ದಿನದಾಟ ಮುಗಿಯುವುದರೊಳಗೆ ಭಾರತ 86 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.
ಇದರಿಂದ ಆತಿಥೇಯ ತಂಡದಲ್ಲಿ ಆತಂಕ ಮೂಡಿಸಿತ್ತು. ಆದರೆ, 5ನೇ ವಿಕೆಟ್‌ಗೆ ಜೊತೆಯಾದ ಶುಭಮನ್ ಗಿಲ್ (90 ರನ್) ಮತ್ತು ರಿಷಭ್ ಪಂತ್ (60 ರನ್) ಅದನ್ನು ದೂರ ಮಾಡಿದರು. ತಲಾ ಅರ್ಧಶತಕ ಗಳಿಸಿದ ಇವರಿಬ್ಬರು 94 ರನ್ ಜೊತೆಯಾಟವಾಡುವ ಮೂಲಕ ಇನಿಂಗ್ಸ್‌ಗೆ ಬಲ ತುಂಬಿದರು.
ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ (38 ರನ್) ಉಪಯುಕ್ತ ಆಟವಾಡಿದ್ದರಿಂದ ಭಾರತ 263 ರನ್ ಗಳಿಸಲು ಸಾಧ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.