ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 46 ರನ್ನಿಗೆ ಆಲೌಟ್ ಆಗಿರುವ ಟೀಮ್ ಇಂಡಿಯಾ ಭಾರಿ ಮುಖಭಂಗಕ್ಕೊಳಗಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಪ್ರಾಬಲ್ಯ ಮೆರೆದರು.
ಭಾರತ 31.2 ಓವರ್‌ಗಳಲ್ಲಿ 46 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಟೀಮ್ ಇಂಡಿಯಾದ ಐದು ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಈ ಹಿಂದೆ 2014ರ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಆರು ಮಂದಿ ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆಗಿದ್ದರು. ಇನ್ನು ಪ್ರಸಕ್ತ ಸಾಲಿನಲ್ಲೇ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಆರು ಮಂದಿ ಬ್ಯಾಟರ್‌ಗಳು ಸೊನ್ನೆ ಸುತ್ತಿದ್ದರು.
1999ರ ಮೊಹಾಲಿ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಭಾರತದ ಐವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆಗಿದ್ದರು. ಹಾಗೆಯೇ 1948 ಅಡಿಲೇಡ್ ಟೆಸ್ಟ್ (ಆಸ್ಟ್ರೇಲಿಯಾ ವಿರುದ್ಧ), 1952ರ ಲೀಡ್ಸ್ ಟೆಸ್ಟ್ (ಇಂಗ್ಲೆಂಡ್ ವಿರುದ್ಧ) ಪಂದ್ಯಗಳಲ್ಲೂ ಐದು ಮಂದಿ ಬ್ಯಾಟರ್‌ಗಳು ಖಾತೆ ತೆರೆಯುವಲ್ಲಿ ವಿಫಲರಾಗಿದ್ದರು.
ಪಂತ್ ಟಾಪ್ ಸ್ಕೋರ್...
ಭಾರತದ ಪರ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ರಿಷಭ್ ಪಂತ್ ಗರಿಷ್ಠ 20 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 13 ಹಾಗೂ ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿ ಔಟ್ ಆದರು.
ಟೀಮ್ ಇಂಡಿಯಾದ ಬ್ಯಾಟರ್‌ಗಳ ಸ್ಕೋರ್ ಕಾರ್ಡ್ ಇಂತಿದೆ: 13, 2, 0, 0, 20, 0, 0, 0, 2, 1, 4*
ನಾಲ್ಕು ರನ್‌ಗಳು ಇತರೆ ರೂಪದಲ್ಲಿ ದೊರಕಿತ್ತು.
ಹೆನ್ರಿ 100 ವಿಕೆಟ್ ಸಾಧನೆ...
ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಐದು (15/5), ವಿಲಿಯಂ ಒ ರೂರ್ಕಿ (22/4) ಮತ್ತು ಟಿಮ್ ಸೌಥಿ (8/1) ಒಂದು ವಿಕೆಟ್ ಗಳಿಸಿ ಮಿಂಚಿದರು. ಈ ಪೈಕಿ ಹೆನ್ರಿ 13.2 ಓವರ್‌ಗಳಲ್ಲಿ 15 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಹಾಗೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.