ದುಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದರೂ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತದ ಮೊದಲ ಸ್ಥಾನ ಅಬಾಧಿತವಾಗಿದೆ. ಆದರೆ ಶೇಕಡವಾರು ಅಂಕದ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರಿನಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಭಾರತ ಕಳೆದುಕೊಂಡಿತ್ತು. ಆ ಮೂಲಕ 13 ವರ್ಷಗಳ ಬಳಿಕ ಕಿವೀಸ್ ಪಡೆ ಭಾರತದಲ್ಲಿ ಟೆಸ್ಟ್ ಗೆಲುವಿನ ಸಂಭ್ರಮ ಆಚರಿಸಿತ್ತು. ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ನ್ಯೂಜಿಲೆಂಡ್ 113ರನ್‌ಗಳಿಂದ ಗೆದ್ದಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2–0ರ ಮುನ್ನಡೆ ಕಾಯ್ದುಕೊಂಡಿದೆ.
ಹಾಲಿ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ಭಾರತಕ್ಕೆ ನಾಲ್ಕನೇ ಸೋಲು ಇದಾಗಿದ್ದು, ಶೇಕಡವಾರು ಅಂಕಗಳಿಕೆ 68.06ರಿಂದ 62.82ಕ್ಕೆ ಕುಸಿದಿದೆ. ಆ ಮೂಲಕ ರೋಹಿತ್ ಬಳಗವು ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಗಿಂಥ (62.50) ಕೇವಲ ಶೇ 0.32 ರಷ್ಟು ಮಾತ್ರ ಮುಂದಿದೆ.
ಮೂರನೇ ಪಂದ್ಯದ ಬಳಿಕ ಭಾರತ ತಂಡವು ಆಸ್ಟ್ರೇಲಿಯಾಗೆ ತೆರಳಲಿದ್ದು, ಭಾರತಕ್ಕೆ ಆ ಸರಣಿ ಮಹತ್ವದೆನಿಸಿದೆ. ಸತತ ಮೂರನೇ ಬಾರಿಗೆ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಲುಪಬೇಕಾದರೆ ಇನ್ನುಳಿದ 6 ಪಂದ್ಯದಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡ ಭಾರತದ ಮೇಲಿದೆ.
ಭಾರತದ ಈ ಸೋಲು, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಏರುವ ಅವಕಾಶ ಮಾಡಿಕೊಟ್ಟಿದೆ.
ಭಾರತದ ವಿರುದ್ಧ ಐತಿಹಾಸಿಕ ಗೆಲುವಿನೊಂದಿಗೆ ಕಿವೀಸ್ ಪಡೆ ಶೇ 50 ಅಂಕಗಳನ್ನು ಗಳಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಶೇ 55.56 ಅಂಕಗಳಿಸಿರುವ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.