ADVERTISEMENT

WTC Final: ಭಾರತ ತಂಡವನ್ನು ಇನ್ನಷ್ಟು ಉತ್ತಮಗೊಳಿಸಬಹುದಿತ್ತು ಎಂದ ಅಮಿತ್ ಮಿಶ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2021, 7:41 IST
Last Updated 19 ಜೂನ್ 2021, 7:41 IST
ಅಮಿತ್‌ ಮಿಶ್ರಾ
ಅಮಿತ್‌ ಮಿಶ್ರಾ   

ನವದೆಹಲಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕಣಕ್ಕಿಳಿಯಲಿರುವ ಭಾರತ ತಂಡದ ಬಗ್ಗೆ ಪ್ರತಿಕ್ರಿಯಿಸಿರುವ ಅನುಭವಿ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ, ತಂಡವನ್ನು ಇನ್ನಷ್ಟು ಉತ್ತಮಗೊಳಿಸಬಹುದಿತ್ತು ಎಂದಿದ್ದಾರೆ. ಇಬ್ಬರು ಸ್ಪಿನ್ನರ್‌ ಹಾಗೂ ಮೂವರು ವೇಗಿಗಳನ್ನೊಳಗೊಂಡ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿತ್ತು.

ಟಿವಿಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಮಿಶ್ರಾ, ಭಾರತ ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಆದರೆ ವೇಗದ ಬೌಲಿಂಗ್‌ ಆಲ್ರೌಂಡರ್‌ ಅನ್ನು ತಂಡದಲ್ಲಿ ಸೇರಿಸಿಕೊಂಡಿದ್ದರೆ ಇಂಗ್ಲೆಂಡ್‌ನ ಪರಿಸ್ಥಿತಿಯಲ್ಲಿ ತಂಡಕ್ಕೆ ಮತ್ತಷ್ಟು ನೆರವು ಸಿಗುತ್ತಿತ್ತು ಎಂದಿದ್ದಾರೆ.

ʼಆಡುವ ಹನ್ನೊಂದರ ಬಳಗವು ಪ್ರಬಲವಾಗಿ ಕಾಣುತ್ತಿದೆ.ಬ್ಯಾಟಿಂಗ್‌ನಲ್ಲಿಯೂ ನೆರವಾಗಬಲ್ಲ ರವೀಂದ್ರ ಜಡೇಜಾ ಹಾಗೂ ಆರ್‌. ಅಶ್ವಿನ್‌ ಅವರಂತಹ ಇಬ್ಬರು ಅತ್ಯುತ್ತಮ ಸ್ಪಿನ್ನರ್‌ಗಳನ್ನು ಹೊಂದಿದ್ದೇವೆ. ಅಶ್ವಿನ್‌ ಮತ್ತು ಜಡೇಜಾರ ಬ್ಯಾಟಿಂಗ್‌ ಕೌಶಲ ಭಾರತಕ್ಕೆ ಸಾಕಷ್ಟು ಸಹಾಯಕವಾಗಲಿದೆ. ವೇಗಿಗಳು ಧಣಿದರೆ ಅವರ ಬದಲುಆರು-ಏಳು ಓವರ್‌ ಬೌಲಿಂಗ್‌ ಮಾಡಬಲ್ಲ ಆಲ್ರೌಂಡರ್‌ ಒಬ್ಬರಿಗೆ ಸ್ಥಾನ ನೀಡಬೇಕಿತ್ತು ಎಂದುನನಗನಿಸುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ʼವೇಗದ ಬೌಲಿಂಗ್‌ ಆಲ್ರೌಂಡರ್‌ ಒಬ್ಬರನ್ನು ಪರಿಗಣಿಸಿದ್ದರೆ,ತಂಡ ಇನ್ನೂ ಉತ್ತಮವಾಗಿರುತ್ತಿತ್ತು. ನ್ಯೂಜಿಲೆಂಡ್‌ ತಂಡದಲ್ಲಿ ಒಬ್ಬ ವೇಗದ ಬೌಲಿಂಗ್‌ ಆಲ್ರೌಂಡರ್‌ ಇದ್ದಾರೆ. ಇದು ಬ್ಲಾಕ್‌ಕ್ಯಾಪ್ಸ್‌ಗಿರುವ (ನ್ಯೂಜಿಲೆಂಡ್‌ ತಂಡಕ್ಕಿರುವ) ಮುಖ್ಯಪ್ರಯೋಜನವಾಗಿದೆʼ ಎಂದಿದ್ದಾರೆ.

ಭಾರತದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಬಲದ ಬಗ್ಗೆಯೂ ಮಾತನಾಡಿರುವ ಮಿಶ್ರಾ, ಭಾರತದ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಕ್ಕಿಂತಲೂ ಬಲಿಷ್ಠವಾಗಿದೆ ಎಂದಿದ್ದಾರೆ.

ʼನನ್ನ ಪ್ರಕಾರ ಭಾರತ ತಂಡದ ಬ್ಯಾಟಿಂಗ್‌ ವಿಭಾಗ, ಬೌಲಿಂಗ್‌ ವಿಭಾಗಕ್ಕಿಂತ ಬಲಿಷ್ಠವಾಗಿದೆ.ಒಟ್ಟಾರೆಯಾಗಿ ಗಮನಿಸಿದರೆ, ನಾವು ಕೆಳ ಕ್ರಮಾಂಕದವರೆಗೆ ಬ್ಯಾಟಿಂಗ್‌ ಮಾಡಬಲ್ಲೆವು. ಕೇವಲ ಮೂವರು ವೇಗಿಗಳು ಮಾತ್ರವೇ ಬ್ಯಾಟಿಂಗ್‌ ಮಾಡಲಾರರು. ಹಾಗಾಗಿ, ಬ್ಯಾಟಿಂಗ್‌ ಪ್ರಬಲವಾಗಿದೆ ಎಂದು ಭಾವಿಸಿದ್ದೇನೆʼ ಎಂದು ಹೇಳಿದ್ದಾರೆ.

ಫೈನಲ್‌ ಪಂದ್ಯವು ಶುಕ್ರವಾರದಿಂದ ಆರಂಭವಾಗಬೇಕಿತ್ತು. ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿದೆ. ಹೀಗಾಗಿ ಆರನೇ ದಿನವೂ ಆಟ ನಡೆಯುವ ಸಾಧ್ಯತೆ ಇದೆ. ಫೈನಲ್‌ ಪಂದ್ಯಕ್ಕೆ ಸಂಬಂಧಿಸಿದ ಐಸಿಸಿ ನಿಯಮಾವಳಿ ಪ್ರಕಾರ,ಅಗತ್ಯವಿದ್ದರೆ ಆರನೇ ದಿನ ಆಟ ಮುಂದುವರಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.