ಕಾನ್ಪುರ: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿರುವ ಟೀಮ್ ಇಂಡಿಯಾ ಡಿಕ್ಲೇರ್ ಮಾಡಿಕೊಂಡಿದೆ. ಇದರೊಂದಿಗೆ, ನ್ಯೂಜಿಲೆಂಡ್‌ಗೆ 284 ರನ್ ಗೆಲುವಿನ ಗುರಿ ನೀಡಿದೆ.
ನಾಲ್ಕನೇ ದಿನದ ಆಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡು 4 ರನ್ ಗಳಿಸಿದೆ. ಆರ್.ಅಶ್ವಿನ್ ಅವರು 1 ವಿಕೆಟ್ ಪಡೆದಿದ್ದಾರೆ. ವಿಲ್ ಯಂಗ್ ಅವರು 2 ರನ್ ಗಳಿಸಿ ಔಟಾಗಿದ್ದು, ಸದ್ಯಟಾಮ್ ಲಥಾಮ್ ಹಾಗೂವಿಲಿಯಂ ಸೊಮರ್ವಿಲ್ಲೆ ಕ್ರೀಸ್‌ನಲ್ಲಿದ್ದಾರೆ.
ನಾಲ್ಕನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್ ಆಡುತ್ತಿದ್ದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಆಡುತ್ತಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ವೃದ್ಧಿಮಾನ್ ಸಹಾ ಆಕರ್ಷಕ ಆಟದ ಮೂಲಕ ಆಧಾರವಾದರು. ಶ್ರೇಯಸ್ ಅಯ್ಯರ್ 65, ವೃದ್ಧಿಮಾನ್ ಸಹಾ ಔಟಾಗದೆ 61 ರನ್ ಗಳಿಸಿದರು.
ಆರ್.ಅಶ್ವಿನ್ (32) ಹಾಗೂ ಅಕ್ಷರ್ ಪಟೇಲ್ (28) ತಾಳ್ಮೆಯ ಆಟವಾಡಿ ತಂಡವು ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 10 ವಿಕೆಟ್ ಕಳೆದುಕೊಂಡು 345 ರನ್ ಗಳಿಸಿತ್ತು. ಶ್ರೇಯಸ್ ಅಯ್ಯರ್ ಶತಕ, ರವೀಂದ್ರ ಜಡೇಜಾ ಹಾಗೂ ಶುಭಮನ್ ಗಿಲ್ ಅರ್ಧಶತಕಗಳು ಇದರಲ್ಲಿ ಸೇರಿದ್ದವು. ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಆಲೌಟ್ ಆಗಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು.
ಭಾರತ ಪರ ಅಕ್ಷರ್ ಪಟೇಲ್ 5 ವಿಕೆಟ್ ಕಬಳಿಸಿ ಮಿಂಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.