ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಕ್ರಿಕೆಟ್ ಪಂದ್ಯ ನಡೆದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ. ಇದೀಗ ಇಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯ ವೀಕ್ಷಿಸಲು ಕೂಡ ಹಲವರು ಕ್ರೀಡಾಂಗಣಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಆದರೆ ಅವರಿಗೆ ಕ್ರೀಡಾಂಗಣದಲ್ಲಿ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲವೆಂಬ ಆರೋಪಗಳು ಕೇಳಿಬಂದಿವೆ.
ಪಂದ್ಯದ ಮೊದಲ ದಿನವಾದ ಬುಧವಾರ 500–600 ಜನರು ಸೇರಿದ್ದರು. ಆದರೆ ಮಳೆಯಿಂದಾಗಿ ದಿನದಾಟ ರದ್ದಾಗಿತ್ತು. ಗುರುವಾರ ಬೆಳಿಗ್ಗೆ ಪಂದ್ಯ ಆರಂಭವಾಗುವುದು ಖಚಿತವಾದಾಗ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿದರು. ಬೆಳಿಗ್ಗೆ 7.45ರಿಂದಲೇ ಗೇಟ್‌ಗಳ ಮುಂದೆ ಸಾಲುಗಟ್ಟಿದ್ದರು. ಆದರೆ ಅವರಿಗೆ ಪ್ರವೇಶ ನೀಡಲು ಭದ್ರತಾ ಸಿಬ್ಬಂದಿ ನಿರಾಕರಿಸಿದರು. 9.15ಕ್ಕೆ ಆರಂಭವಾಗುವ ಪಂದ್ಯಕ್ಕೆ 8.50ರ ನಂತರ ಪ್ರವೇಶಕ್ಕೆ ಅವಕಾಶ ಮಾಡಿದರು.
‘ಟಾಸ್ ಆಗಲು 10 ನಿಮಿಷ ಮತ್ತು ಪಂದ್ಯ ಆರಂಭಕ್ಕೆ 30 ನಿಮಿಷ ಇದ್ದಾಗಲೂ ಒಳಗೆ ಪ್ರವೇಶ ನೀಡಲಿಲ್ಲ. ಗೇಟ್ ಮುಂದೆ ನಿಲ್ಲಬೇಕಾಯಿತು’ ಎಂದು ಪ್ರೇಕ್ಷಕರೊಬ್ಬರು ದೂರಿದರು.
‘ಟೆಸ್ಟ್ ಪಂದ್ಯಗಳನ್ನು ನೋಡಲು ಜನರು ಬರುವುದೇ ಕಮ್ಮಿ. ಅಂತಹುದರಲ್ಲಿ ಆಯೋಜಕರು ಈ ರೀತಿ ಅನಾದರ ತೋರುವುದು ಸರಿಯಲ್ಲ. ಟಿಕೆಟ್ ಖರೀದಿಸಿದವರನ್ನೂ ಒಳಬಿಡುವುದಿಲ್ಲ ಎನ್ನುವುದು ಸರಿಯಲ್ಲ. ಭಾರತದಲ್ಲಿ ಟಿ20 ಕ್ರಿಕೆಟ್ ಪಂದ್ಯಗಳನ್ನು ನಾನು ನೋಡಿದ್ದೇನೆ. ಅವ್ಯವಸ್ಥೆಗಳಿಂದಾಗಿ ಬಹಳ ಕೆಟ್ಟ ಅನುಭವವಾಗಿದೆ’ ಎಂದು ಇಎಸ್‌ಪಿಎನ್ ಫ್ಯಾನ್ ಎಂಗೇಜ್‌ಮೆಂಟ್ ಪೇಜ್‌ನಲ್ಲಿ ರಾಮಕೃಷ್ಣನ್ ಎಂಬ ಪ್ರೇಕ್ಷಕರು ಬರೆದಿದ್ದಾರೆ.
ಪ್ರೇಕ್ಷಕರಿಗೆ ಪ್ರವೇಶದ ತೊಂದರೆಯಾಗಿರುವುದರ ಕುರಿತು ಪ್ರತಿಕ್ರಿಯಿಸಿದ ಕೆಎಸ್‌ಸಿಎ ಅಧಿಕಾರಿಗಳು ಅದು ಪೊಲೀಸರಿಗೆ ಬಿಟ್ಟ ವಿಷಯ ಎಂದು ಹೇಳಿ ಜಾರಿಕೊಂಡರು.
ಎನ್ ಸ್ಟ್ಯಾಂಡ್‌ನಲ್ಲಿ ಕುರ್ಚಿಗಳ ಮೇಲೆ ದೂಳು, ಪಕ್ಷಿಗಳ ಹಿಕ್ಕೆಗಳು ಇರುವ ಚಿತ್ರವನ್ನು ಬುಧವಾರ ಪ್ರೇಕ್ಷಕರೊಬ್ಬರು ಎಕ್ಸ್ ಖಾತೆಯಲ್ಲಿ ಹಾಕಿದ್ದರು.
‘ನಮ್ಮಸಿಬ್ಬಂದಿಯು ವಿಳಂಬ ಮಾಡಿಲ್ಲ. ಕ್ರೀಡಾಂಗಣದ ಆಡಳಿತಾಧಿಕಾರಿಗಳೂ ಪ್ರೇಕ್ಷಕರಿಗೆ ಪ್ರವೇಶ ನೀಡಲು ಹಸಿರು ನಿಶಾನೆ ನೀಡಿದ ಕೂಡಲೇ ನಾವು ಬಿಟ್ಟಿದ್ದೇವೆ. ಎಲ್ಲರನ್ನೂ ತಪಾಸಣೆ ಮಾಡಿ ಒಳಬಿಡಲಾಗಿದೆ’ ಎಂದು ಡಿಸಿಪಿ ಶೇಖರ್ ಎಚ್ ಟೇಕ್ಕಣ್ಣವರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.