ಬೆಂಗಳೂರು: ‘ನನ್ನ ತಂಡವು ಕೇವಲ 46 ರನ್‌ಗಳ ಕನಿಷ್ಠ ಮೊತ್ತಕ್ಕೆ ಕುಸಿದಿದ್ದು ಅತೀವ ಬೇಸರ ತರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರ ನನ್ನದೇ ಆಗಿತ್ತು. ಒಂದು ವರ್ಷದಲ್ಲಿ ಕೆಲವೇ ಕೆಲವು ಕೆಟ್ಟ ನಿರ್ಧಾರಗಳು ಅರಿವಿಲ್ಲದೇ ಆಗಿಬಿಡುತ್ತವೆ’–
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ನಂತರ ಸುದ್ದಿಗೋಷ್ಠಿಗೆ ಬಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಹೇಳಿದ ಮಾತುಗಳಿವು. ಭಾರತ ತಂಡವು ಸ್ವದೇಶದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದರ ಕುರಿತು ಬೇರೆ ಯಾವುದೇ ಕಾರಣಗಳನ್ನೂ ಅವರು ಕೊಡಲಿಲ್ಲ. ಎಲ್ಲ ಹೊಣೆಯನ್ನೂ ತಮ್ಮ ಮೇಲೆಳೆದುಕೊಂಡರು.
‘ಪಿಚ್ ಅಂದಾಜು ಮಾಡುವಲ್ಲಿ ತಪ್ಪಾಯಿತು. ಅಂಕಣದಲ್ಲಿ ಹುಲ್ಲು ಗರಿಕೆಗಳು ಇಲ್ಲ ಅನಿಸಿದ್ದರಿಂದ ಮೊದಲ ಒಂದು ಅವಧಿಯಲ್ಲಿ ಬ್ಯಾಟಿಂಗ್ ಕಷ್ಟವಾಗಬಹುದು. ನಂತರ ಚೆಂಡು ತಿರುಗಲು ಆರಂಭಿಸುತ್ತದೆ ಎಂದು ಅಂದಾಜು ಮಾಡಿದ್ದೆವು. ಭಾರತದಲ್ಲಿ ಆಡುವಾಗ ಮೊದಲ ಅವಧಿಯಲ್ಲಿ ಯಾವಾಗಲೂ ಬ್ಯಾಟಿಂಗ್ ಮಾಡುವುದು ಕಷ್ಟವೇ. ಒಮ್ಮೆ ಪಿಚ್ ಹದಗೊಂಡಿತೆಂದರೆ ಸ್ಪಿನ್ನರ್‌ಗಳ ಆಟ ಶುರುವಾಗುತ್ತದೆ. ಆದ್ದರಿಂದ ಮೂವರು ಸ್ಪಿನ್ನರ್ (ಕುಲದೀಪ್ ಯಾದವ್ ಸೇರಿ) ಗಳೊಂದಿಗೆ ಕಣಕ್ಕಿಳಿದಿದ್ದೇವೆ’ ಎಂದರು.
‘ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಅನುಭವಿ ಆಟಗಾರರು ತಾವೇ ಮುಂದು ಬರುತ್ತಿರುವುದು ತಂಡದ ಹಿತದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ವಿರಾಟ್ ಕೊಹ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಆಡಲು ಬಂದರು. ಅದು ಅವರ ಸಹಮತದೊಂದಿಗೇ ಆದ ಬದಲಾವಣೆ. ಪಂತ್ ಮತ್ತು ರಾಹುಲ್ ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಸರ್ಫರಾಜ್ ಖಾನ್ ಇದ್ದಾರೆ. ರಾಹುಲ್ ಅವರಿಗೆ 6ನೇ ಸ್ಥಾನದಲ್ಲಿ ತಮ್ಮ ಸಾಮರ್ಥ್ಯ ತೋರುವ ಅವಕಾಶ ಸಿಕ್ಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.