ADVERTISEMENT

IND vs NZ | ಚಿನ್ನಸ್ವಾಮಿಯಲ್ಲಿ ಮಳೆಗೂ ಮುನ್ನ ಸರ್ಫರಾಜ್–ರಿಷಭ್ ಆರ್ಭಟ

ಗಿರೀಶ ದೊಡ್ಡಮನಿ
Published 19 ಅಕ್ಟೋಬರ್ 2024, 6:08 IST
Last Updated 19 ಅಕ್ಟೋಬರ್ 2024, 6:08 IST
<div class="paragraphs"><p>ಶತಕ ಬಾರಿಸಿದ ಸರ್ಫರಾಜ್ ಖಾನ್</p></div>

ಶತಕ ಬಾರಿಸಿದ ಸರ್ಫರಾಜ್ ಖಾನ್

   

– ಪಿಟಿಐ ಚಿತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮಳೆ ಬಂದು ಆಟ ನಿಲ್ಲುವ ಮುನ್ನ ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್ ಆರ್ಭಟಿಸಿದರು.

ADVERTISEMENT

ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೆ ದಿನದಾಟದಲ್ಲಿ ಮುಂಬೈನ ಸರ್ಫರಾಜ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ (ಬ್ಯಾಟಿಂಗ್ 125) ದಾಖಲಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ ಪ್ರಥಮ ಶಕತ.

ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್‌ಕೀಪಿಂಗ್ ಮಾಡುವಾಗ ಮೊಣಕಾಲಿಗೆ ಚೆಂಡು ಬಡಿದು ನೋವು ಅನುಭವಿಸಿದ್ದ ರಿಷಭ್ ಮತ್ತೊಮ್ಮೆ ತಾವು ಆಪದ್ಭಾಂದವ ಎಂಬುದನ್ನು ತೋರಿಸಿದರು. ತಮಗಿಂತ ಜೂನಿಯರ್ ಆಟಗಾರ ಸರ್ಫರಾಜ್ ಅವರನ್ನು ಹುರಿದುಂಬಿಸುತ್ತ, ಆಗಾಗ ತಿದ್ದಿ ತೀಡುತ್ತಾ ಶತಕದ ಜೊತೆಯಾಟ ಕಟ್ಟಿದರು. ಅಪಾರ ಏಕಾಗ್ರತೆಯ ಮೂಲಕ ರಿಷಭ್ (ಬ್ಯಾಟಿಂಗ್ 53) ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಅರ್ಧಶತಕ ದಾಖಲಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಭಾರತವು 46 ರನ್‌ಗಳಿಗೆ ಆಲೌಟ್ ಆಗಿತ್ತು. ನ್ಯೂಜಿಲೆಂಡ್ ತಂಡವು ರಚಿನ್ ರವೀಂದ್ರ ಶತಕದ ಬಲದಿಂದ 402 ರನ್‌ ಗಳಿಸಿತ್ತು. 356 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್ ಆಡುತ್ತಿರುವ ಈ ಲೆಕ್ಕವನ್ನು ಚುಕ್ತಾ ಮಾಡಲು ಭಾರತ ತಂಡಕ್ಕೆ 12 ರನ್‌ಗಳಷ್ಟೇ ಬೇಕು. ನಂತರ ಕಿವೀಸ್ ಬಳಗಕ್ಕೆ ಕಠಿಣ ಗುರಿ ನೀಡಿ (ಕನಿಷ್ಠ 200 ರನ್) ಗೆಲುವಿಗೆ ಪ್ರಯತ್ನಿಸಬೇಕು. ಅದರಿಂದಾಗಿ ಮಳೆ ನಿಂತ ಮೇಲಿನ ಆಟವು ರೋಚಕವಾಗುವ ನಿರೀಕ್ಷೆ ಇದೆ.

ಸದ್ಯ ತಂಡವು 71 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 344 ರನ್‌ ಗಳಿಸಿದೆ.

ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್

ಬೆಳಿಗ್ಗೆ 11 ಗಂಟೆಗೆ ಮಳೆ ಆರಂಭವಾಗುವವರೆಗೂ ಕ್ರಿಕೆಟ್‌ಪ್ರೇಮಿಗಳಿಗೆ ಭರ್ಜರಿ ಮನರಂಜನೆ ಲಭಿಸಿತು. ಟಿಕೆಟ್‌ಗೆ ವ್ಯಯಿಸಿದ ದುಡ್ಡು ವಸೂಲಾಯಿತು. ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್ ಅವರ ಆಟ ಹಾಗಿತ್ತು. ಬೆಳಗಿನಿಂದಲೂ ಮಂದಬೆಳಕು ಇದ್ದ ಕಾರಣ, ಫ್ಲಡ್‌ಲೈಟ್ ಹಾಕಲಾಗಿತ್ತು. ಆ ದೀಪಕ್ಕಿಂತಲೂ ಹೆಚ್ಚು ಇವರಿಬ್ಬರೂ ಪ್ರಖರವಾಗಿ ಬೆಳಗಿದರು.

ಇಬ್ಬರಿಗೂ ಅದೃಷ್ಟ ಕೂಡ ಜೊತೆಗೂಡಿತು. ಹತ್ತಾರು ಸಲ ಕೂದಲೆಳೆಯ ಅಂತರದಲ್ಲಿ ಔಟಾಗುವ ಅಪಾಯಗಳನ್ನು ಇಬ್ಬರೂ ತಪ್ಪಿಸಿಕೊಂಡರು. ಶುಕ್ರವಾರದ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಔಟಾಗಿ ನಡೆದಾಗ ಎದುರಾಗಿದ್ದ ಆತಂಕವನ್ನು ಪಂತ್ ಮತ್ತು ಸರ್ಫರಾಜ್ ದೂರ ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಮೆರೆದಿದ್ದ ಕಿವೀಸ್ ವೇಗಿಗಳ ಎಸೆತಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಸ್ಪಿನ್ನರ್‌ಗಳನ್ನೂ ಬಿಡಲಿಲ್ಲ. ಚುರುಕಿನ ಫೀಲ್ಡರ್‌ಗಳಿದ್ದರೂ ಬೌಂಡರಿಗಳಿಗೆ ಕೊರತೆ ಇರಲಿಲ್ಲ. ಅಷ್ಟೇ ಅಲ್ಲ; ಸಿಕ್ಸರ್‌ಗಳೂ ಸಿಡಿದವು.

ಎಜಾಜ್ ಪಟೇಲ್ ಹಾಕಿದ 66ನೇ ಓವರ್ ನಾಟಕೀಯವಾಗಿತ್ತು ಈ ಓವರ್‌ನ ಎರಡು ಎಸೆತಗಳಲ್ಲಿ ಸತತ ಸಿಕ್ಸರ್‌ಗಳನ್ನು ಎತ್ತಿದ ರಿಷಭ್ ಪಂತ್. ನಂತರದ ಎರಡು ಎಸೆತಗಳಲ್ಲಿ ಔಟಾಗುವ ಅಪಾಯದಿಂದ ಪಾರಾದರೂ ಒಂದು ಸಲ ಅಂಪೈರ್ ಎಲ್‌ಬಿಡಬ್ಲ್ಯು ಕೊಟ್ಟಿದ್ದರು. ರಿಷಭ್ ‍ಪಡೆದ ಡಿಆರ್‌ಎಸ್ ಮನವಿಯಲ್ಲಿ ಬ್ಯಾಟ್‌ ಅಂಚು ಸವರಿದ್ದ ಚೆಂಡು ಪ್ಯಾಡ್‌ಗೆ ಬಡಿದಿತ್ತು. ಅಂಪೈರ್ ತೀರ್ಪು ವಾಪಾಸ್ ಪಡೆದರು. ನಂತರದ ಎಸೆತದಲ್ಲಿಯೂ ಅದೇ ರೀತಿಯಾಗಿತ್ತು. ಆದರೆ ಅಂಪೈರ್ ಔಟ್ ನೀಡಲಿಲ್ಲ. ನ್ಯೂಜಲೆಂಡ್ ಡಿಆರ್‌ಎಸ್‌ನಲ್ಲಿ ನಾಟೌಟ್ ನಿರ್ಧಾರ ಪ್ರಕಟವಾಯಿತು. ರಿಷಭ್ ಆರ್ಭಟ ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.