ADVERTISEMENT

IND vs NZ | ಮೂರನೇ ದಿನದಾಟ: ಸೋಲುವ ಆತಂಕದಲ್ಲಿ ಆತಿಥೇಯರು

ರಚಿನ್ ರವೀಂದ್ರ ಶತಕ, ವಿರಾಟ್, ಸರ್ಫರಾಜ್ ಅಮೋಘ ಜೊತೆಯಾಟ; ರೋಹಿತ್ ಅರ್ಧಶತಕ

ಗಿರೀಶ ದೊಡ್ಡಮನಿ
Published 18 ಅಕ್ಟೋಬರ್ 2024, 22:00 IST
Last Updated 18 ಅಕ್ಟೋಬರ್ 2024, 22:00 IST
ಸರ್ಫರಾಜ್ ಖಾನ್ ಬ್ಯಾಟಿಂಗ್ ಶೈಲಿ
ಸರ್ಫರಾಜ್ ಖಾನ್ ಬ್ಯಾಟಿಂಗ್ ಶೈಲಿ   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಸೇರಿದ್ದ ಹದಿನಾರು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಗೆ ಕ್ರಿಕೆಟ್‌ನ ಎಲ್ಲ ರೀತಿಯ ಸೊಬಗು ಸವಿಯುವ ಅವಕಾಶ ಲಭಿಸಿತು. ಇಲ್ಲಿ ಒಟ್ಟು 90.3 ಓವರ್‌ಗಳ ಆಟ ನಡೆಯಿತು.  ಅದರಲ್ಲಿ ಒಂದು ಶತಕ, ನಾಲ್ಕು ಅರ್ಧಶತಕಗಳಿದ್ದ 456 ರನ್‌ಗಳು ದಾಖಲಾದವು. ಒಟ್ಟು 10 ವಿಕೆಟ್‌ಗಳೂ ಉರುಳಿದವು.  ಶತಕದ ಜೊತೆಯಾಟಗಳ ರಸದೌತಣವೂ ಇತ್ತು. 

ಹೌದು; ಇಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ಇಷ್ಟೆಲ್ಲ ವಿಶೇಷಗಳಿಗೆ ವೇದಿಕೆಯಾಯಿತು.  ಆದರೆ ಇದೆಲ್ಲದರಾಚೆ; ಆತಿಥೇಯರ ನೆತ್ತಿಯ ಮೇಲೆ ಇನ್ನೂ ಸೋಲಿನ ಕತ್ತಿ ತೂಗುತ್ತಿದೆ.  ದಿನದಾಟದ ಕೊನೆಯ ಎಸೆತದಲ್ಲಿ ಔಟಾದ ವಿರಾಟ್ ಕೊಹ್ಲಿ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತಿದ್ದ ರೋಹಿತ್ ಶರ್ಮಾ ಅವರ ಮುಖದಲ್ಲಿ ಆತಂಕದ ಛಾಯೆ ಎದ್ದುಕಂಡಿತು. ಪ್ರಥಮ ಇನಿಂಗ್ಸ್ ಪ್ರಮಾದ (46ಕ್ಕೆ ಆಲೌಟ್) ಸರಿಪಡಿಸಿಕೊಳ್ಳುವ ಪ್ರಯತ್ನ ಫಲಿಸುವುದೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಸಾಧಿಸಿರುವ 356 ರನ್‌ಗಳ ದೊಡ್ಡ ಮುನ್ನಡೆಗೆ ಉತ್ತರವಾಗಿ ಭಾರತ ತಂಡವು ದಿನದಾಟದ ಕೊನೆಗೆ 49 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 231 ರನ್ ಗಳಿಸಿದೆ. ಈ ಮೊತ್ತ ಚುಕ್ತಾ ಮಾಡಲು ಆತಿಥೇಯರು ಇನ್ನೂ 125 ರನ್‌ ಗಳಿಸಬೇಕು. ಅದರ ನಂತರ ಕಿವೀಸ್ ಬಳಗಕ್ಕೆ 200ಕ್ಕೂ ಹೆಚ್ಚು ರನ್‌ಗಳ ಗುರಿಯೊಡ್ಡಿದರೆ, ಬೌಲರ್‌ಗಳು ಜಯದ ಕಾಣಿಕೆ ನೀಡಲು ಪ್ರಯತ್ನಿಸಬೇಕು. ಇದೆಲ್ಲ ಮಾಡಲು ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿ ಇವೆ. ಸದ್ಯ ಕ್ರೀಸ್‌ನಲ್ಲಿರುವ ಸರ್ಫರಾಜ್ ಖಾನ್ (ಔಟಾಗದೆ 70; 78ಎ) ಮತ್ತು ಇನ್ನುಳಿದ ಬ್ಯಾಟರ್‌ಗಳು ಈ ಕಠಿಣ ಗುರಿಯನ್ನು ಸಾಧ್ಯವಾಗಿಸುವರೇ ಎಂಬುದೇ ಈಗ ಕುತೂಹಲ ಮೂಡಿಸಿರುವ ಸಂಗತಿ. ಆದರೆ ನ್ಯೂಜಿಲೆಂಡ್ ತಂಡವು ಶನಿವಾರವೇ ಆತಿಥೇಯರಿಗೆ ಸೊಲಿನ ರುಚಿ ತೋರಿಸುವ  ಹುಮ್ಮಸ್ಸಿನಲ್ಲಿದೆ.

ADVERTISEMENT

ವಿರಾಟ್–ಸರ್ಫರಾಜ್ ಜೊತೆಯಾಟ

ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ವಿರಾಟ್ ಮತ್ತು ಸರ್ಫರಾಜ್ ಅವರ ಶತಕದ ಜೊತೆಯಾಟವು (136 ರನ್) ಎರಡನೇ ಇನಿಂಗ್ಸ್‌ನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು.

ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ (35 ರನ್) ಮತ್ತು ನಾಯಕ ರೋಹಿತ್ ಶರ್ಮಾ (52 ರನ್) ಮೊದಲ ವಿಕೆಟ್ ಜೊತೆಯಾಟದಲ್ಲಿ 72 ರನ್ ಸೇರಿಸಿದರು. 18ನೇ ಓವರ್‌ನಲ್ಲಿ ಎಜಾಜ್ ಪಟೇಲ್ ಎಸೆತವನ್ನು ಎರಡೆಜ್ಜೆ ಮುಂದೆ ಹೋಗಿ ಆಡುವ ಧಾವಂತಕ್ಕೆ ಬಿದ್ದ ಜೈಸ್ವಾಲ್ ಅವರನ್ನು ಸ್ಟಂಪಿಂಗ್ ಮಾಡುವಲ್ಲಿ ವಿಕೆಟ್‌ಕೀಪರ್ ಟಾಮ್ ಬ್ಲಂಡೆಲ್ ಯಶಸ್ವಿಯಾದರು. ಆಗ ಕ್ರೀಸ್‌ಗೆ ಬಂದ ವಿರಾಟ್ ಅವರಿಗೆ ಪ್ರೇಕ್ಷಕರಿಂದ ಸಂಭ್ರಮದ ಸ್ವಾಗತ ದೊರೆಯಿತು. ತಮ್ಮ ಅಭಿಮಾನಿಗಳನ್ನು ಅವರು ನಿರಾಶೆಗೊಳಿಸಲಿಲ್ಲ.

ರೋಹಿತ್ ಮತ್ತು ಕೊಹ್ಲಿ ನಿಧಾನವಾಗಿ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಇಬ್ಬರ ಜೊತೆಯಾಟದಲ್ಲಿ 23 ರನ್‌ಗಳು ಸೇರಿದ್ದ ಸಂದರ್ಭದಲ್ಲಿ ರೋಹಿತ್‌ಗೆ ಅದೃಷ್ಟ ಕೈಕೊಟ್ಟಿತು. ಪಟೇಲ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದರು. ಆದರೆ ಚೆಂಡು ಬ್ಯಾಟ್‌ಗೆ ಬಡಿದು ಮುಂದೆ ಹೋಗುವ ಬದಲು ಹಿಂದೆ ಸಾಗಿತು. ರೋಹಿತ್ ಕಾಲಿನ ಹಿಂದೆ ಪುಟಿದು ಸ್ಟಂಪ್‌ಗಳಿಗೆ ಮುತ್ತಿಕ್ಕಿತು. 

ವಿರಾಟ್ ಜೊತೆಗೂಡಿದ ಸರ್ಫರಾಜ್ ಇನಿಂಗ್ಸ್‌ ದಿಕ್ಕನ್ನೇ ಬದಲಿಸಿಬಿಟ್ಟರು. ವಿರಾಟ್‌ಗಿಂತಲೂ ವೇಗವಾಗಿ ರನ್‌ ಗಳಿಸಿದರು. 100ರ ಸ್ಟ್ರೈಕ್‌ರೇಟ್‌ನಲ್ಲಿ ಅವರ ಗಳಿಕೆ ಇತ್ತು. ಪರಿಣಾಮಕಾರಿ ಬೌಲರ್‌ ಎಜಾಜ್ ಪಟೇಲ್ ಅವರ ಒಂದೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಸ್ಲಾಗ್‌ ಸ್ವೀಪ್ ಮೂಲಕ ಹೊಡೆದರು.  ವಿಲಿಯಂ ಓ ರೂರ್ಕಿ ಎಸೆತವೊಂದನ್ನು ಕಾಮನಬಿಲ್ಲಿನಂತೆ ಬೆನ್ನು ಬಾಗಿಸಿಕೊಂಡು ಆಡಿದ ಹೊಡೆತವಂತೂ ಅಮೋಘವಾಗಿತ್ತು. ಕ್ಲಿಷ್ಟವಾದ ಈ ಹೊಡೆತವನ್ನು ಅವರು ಯಶಸ್ವಿಯಾಗಿ ಆಡಿದರು. ಇನ್ನೊಂದೆಡೆ ವಿರಾಟ್ ತಮ್ಮ ಆಕರ್ಷಕವಾದ ಡ್ರೈವ್‌, ಫ್ಲಿಕ್‌ಗಳ ಮೂಲಕ ರನ್‌ ಗಳಿಸಿದರು. 31ನೇ ಅರ್ಧಶತಕ ದಾಖಲಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳ ಮೈಲಿಗಲ್ಲು ಕೂಡ ದಾಟಿದರು. ಆದರೆ ದಿನದಾಟದ ಕೊನೆಯ ಎಸೆತದಲ್ಲಿ ಗ್ಲೆನ್ ಫಿಲಿಪ್ ಎಸೆತವು ಬ್ಯಾಟ್‌ ಅಂಚನ್ನು ಸವರಿ ವಿಕೆಟ್‌ಕೀಪರ್ ಕೈಸೇರಿದ್ದು ಅಂಪೈರ್ ತೀರ್ಪು ಮರುಪರಿಶೀಲನೆಯಲ್ಲಿ ಖಚಿತವಾಯಿತು.

ವಿರಾಟ್ ಕೊಹ್ಲಿ ಆಟ

ರಚಿನ್ ಶತಕ; ಸೌಥಿ ಅಬ್ಬರ

ಈ ಪಂದ್ಯದ ಮೊದಲ ದಿನದಾಟವು ಸಂಪೂರ್ಣವಾಗಿ ಮಳೆಗಾಹುತಿಯಾಗಿತ್ತು.  ಎರಡನೇ ದಿನ ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ 46 ರನ್‌ಗಳಿಗೆ ಆಲೌಟ್ ಆಗಿ ಸ್ವದೇಶದಲ್ಲಿ ಅತಿ ಕನಿಷ್ಠ ಮೊತ್ತದ ದಾಖಲೆ ಮಾಡಿತ್ತು. ಆತಿಥೇಯರು ಪರದಾಡಿದ್ದ ಪಿಚ್‌ನಲ್ಲಿಯೇ ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 402 ರನ್ ಗಳಿಸಿತು. ಅದಕ್ಕೆ ಕಾರಣವಾಗಿದ್ದು ಬೆಂಗಳೂರು ಮೂಲದ ಹುಡುಗ ರಚಿನ್ ರವೀಂದ್ರ (134; 157ಎ) ಶತಕ ಮತ್ತು ಟಿಮ್ ಸೌಥಿ (65; 73ಎ) ಅವರ ಮಿಂಚಿನ ಅರ್ಧಶತಕ. ಇಬ್ಬರೂ 8ನೇ ವಿಕೆಟ್ ಜೊತೆಯಾಟದಲ್ಲಿ 137 ರನ್‌ ಸೇರಿಸಿದರು. ಗುರುವಾರ ದಿನದಾಟದ ಕೊನೆಗೆ ಕಿವೀಸ್ ಬಳಗವು 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಮೂರನೇ ದಿನ ಬೆಳಿಗ್ಗೆ ಆಟ ಮುಂದುವರಿಸಿತು. ಕ್ರೀಸ್‌ನಲ್ಲಿದ್ದ  ರಚಿನ್ ರವೀಂದ್ರ   ಮತ್ತು ಡ್ಯಾರಿಲ್ ಮಿಚೆಲ್ ಅವರ ಜೊತೆಯಾಟವು ದೊಡ್ಡದಾಗಿ ಬೆಳೆಯಲು ಸಿರಾಜ್ ಅವಕಾಶ ಕೊಡಲಿಲ್ಲ. ದಿನದ ಮೂರನೇ ಓವರ್‌ನಲ್ಲಿಯೇ ಮಿಚೆಲ್ ವಿಕೆಟ್ ಗಳಿಸಿದರು. ಬ್ಲಂಡೆಲ್ ಹೆನ್ರಿ ಮತ್ತು ಗ್ಲೆನ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸ್ಪಿನ್ನರ್‌ಗಳು ಮಿಂಚಿದರು. ಆದರೆ ರಚಿನ್ ಜೊತೆಗೂಡಿದ ಟಿಮ್ ಸೌಥಿ ಮಾತ್ರ ಯಾರಿಗೂ ಜಗ್ಗಲಿಲ್ಲ. ರಚಿನ್ ಅವರಿಗೆ ಒಂದು ಜೀವದಾನವೂ ಲಭಿಸಿತು. ಇದರಿಂದಾಗಿ ರಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದರು. 

ಮಗನ ಶತಕ ಮನದುಂಬಿಕೊಂಡ ಅಪ್ಪ

ಬಹುತೇಕ ಎಲ್ಲ ಮಕ್ಕಳಿಗೂ ಅಜ್ಜ– ಅಜ್ಜಿಯ ಊರೆಂದರೆ ನಲಿವಿನ ತಾಣ. ಮನೋಲ್ಲಾಸದ ಸೊಬಗಿನ ಊರು. ಅಜ್ಜಿಯ ಊರಿನಲ್ಲಿ ಕಳೆದ ರಜಾ ದಿನಗಳು ಜೀವನದ ಪ್ರತಿ ಹಂತದಲ್ಲಿಯೂ  ಸ್ಮರಣೀಯವಾಗಿರುತ್ತವೆ.  ನ್ಯೂಜಿಲೆಂಡ್ ತಂಡದ ಆಟಗಾರ ರಚಿನ್ ರವೀಂದ್ರ ಅವರಿಗೆ ಇದೆಲ್ಲದರ ಜೊತೆಗೆ ತಮ್ಮ ಅಜ್ಜ ಅಜ್ಜಿ ಇರುವ ಬೆಂಗಳೂರಿನಲ್ಲಿ ಟೆಸ್ಟ್ ಶತಕ ಸಾಧನೆ ಮಾಡಿದ ನೆನಪು ಕೂಡ ಈಗ ಸೇರಿಕೊಂಡಿದೆ. ಅದೂ ಭಾರತ ತಂಡದ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಎನ್ನುವುದು ಇನ್ನೊಂದು ವಿಶೇಷ. ರಚಿನ್ ಹುಟ್ಟಿ ಬೆಳೆದಿದ್ದು ನ್ಯೂಜಿಲೆಂಡ್‌ನಲ್ಲಿ. ಆದರೆ ಅಪ್ಪ ಅಮ್ಮನ ಊರು ಬೆಂಗಳೂರೆಂದರೆ ಅಚ್ಚುಮೆಚ್ಚು. ಅದಕ್ಕಾಗಿಯೇ ಇಲ್ಲಿ ಬಂದಾಗಲೆಲ್ಲ ಒಂದು ಸಾಧನೆಯನ್ನು ಮಾಡಿ ಹೋಗುತ್ತಾರೆ. ಕಳೆದ ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅವರು ಶ್ರೀಲಂಕಾ ಎದುರು ಶತಕ ದಾಖಲಿಸಿದ್ದರು. ಇದೀಗ ಇಲ್ಲಿ ಶತಕ ಹೊಡೆಯುವ ಮೂಲಕ ಭಾರತ ತಂಡಕ್ಕೆ ಸೋಲಿನ ಭೀತಿ ಎದುರಾಗುವಂತೆ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೂರರ ಗಡಿ ದಾಟಿದಾಗ ಅವರು ತುಸು ಭಾವುಕರಾದಂತೆ ಕಂಡರು. ಗಣ್ಯರ ಗ್ಯಾಲರಿಯಲ್ಲಿದ್ದ ಅವರ ತಂದೆ ಅಜ್ಜ ಅಜ್ಜಿ ಮತ್ತು ಸಂಬಂಧಿಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ರಚಿನ್ ತಂದೆ ರವಿ ಕೃಷ್ಣಮೂರ್ತಿ ‘ಯಾವ ಸಾಧನೆಯೂ ಸುಲಭವಾಗಿ ಒಲಿಯುವುದಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಪೂರ್ವಾಭ್ಯಾಸಗಳು ಬೇಕು. ರಚಿನ್ ಬಹಳ ಕಷ್ಟಪಟ್ಟಿದ್ದರ ಫಲ ಈಗ ಲಭಿಸುತ್ತಿದೆ.  ಈ ಟೆಸ್ಟ್ ಪಂದ್ಯ ಆರಂಭವಾಗುವ ಒಂದು ವಾರ ಮುನ್ನ ರಚಿನ್  ಚೆನ್ನೈ ಸೂಪರ್ ಕಿಂಗ್ಸ್‌ ಶಿಬಿರದಲ್ಲಿ ಅಭ್ಯಾಸ ಮಾಡಿದ್ದರು. ಚೆನ್ನೈನ 40 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ  ಬೆವರು ಹರಿಸಿದ್ದರು.  ಅದರಿಂದಾಗಿ ಇಲ್ಲಿಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಟೆಸ್ಟ್ ಪಂದ್ಯದಲ್ಲಿ   ಯಾರು ಬೇಕಾದರೂ ಶತಕ ಮಾಡುತ್ತಾರೆ. ಇದೇ ಪಂದ್ಯದಲ್ಲಿ ಡೆವೊನ್ ಕಾನ್ವೆ  ಅಲ್ಪ ಅಂತರದಲ್ಲಿ ನೂರರ ಗಡಿ ಮುಟ್ಟುವುದನ್ನು ತಪ್ಪಿಸಿಕೊಂಡರಲ್ಲವೇ. ಆದರೆ ಅದರ ಹಿಂದೆ ಇರುವ ಪರಿಶ್ರಮ ಮುಖ್ಯ’ ಎಂದರು. ‘ನಾನು ರಚಿನ್‌ಗೆ ಕ್ರಿಕೆಟ್‌ ಬಗ್ಗೆ ಈಗ ಹೆಚ್ಚು ಹೇಳಿಕೊಡುವುದಿಲ್ಲ. ಬಾಲ್ಯದಲ್ಲಿ ಹೇಳಿಕೊಡುತ್ತಿದ್ದೆ. ಅದು ಬೇರೆ ವಿಷಯ. ಈಗ ರಚಿನ್ ಉನ್ನತ ಹಂತದಲ್ಲಿ ಆಡುತ್ತಿದ್ದಾರೆ. ಬೂಮ್ರಾ ಅಥವಾ ಅಶ್ವಿನ್ ಅವರಂತಹ ಶ್ರೇಷ್ಠ ಬೌಲರ್‌ಗಳನ್ನು ಎದುರಿಸುತ್ತಿದ್ದಾರೆ. ಆ ಹಂತದಲ್ಲಿ ಸಲಹೆ ನೀಡುವುದು ನನ್ನಿಂದಾಗದು. ಆದ್ದರಿಂದ ನಾನೀಗ ರಚಿನ್ ಆಟವನ್ನು ಮನತುಂಬಿ ಆಸ್ವಾದಿಸುತ್ತಿದ್ದೇನೆ’ ಎಂದರು.  ದಿನದಾಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಚಿನ್  ‘ಅಪ್ಪ ಮತ್ತು ಕುಟುಂಬದವರ ಮುಂದೆ ಶತಕ ಗಳಿಸಿದ್ದು ಖುಷಿಯಾಗಿದೆ. ಶ್ರೇಷ್ಠ ದರ್ಜೆಯ ಸ್ಪಿನ್ನರ್‌ಗಳ ಮುಂದೆ ಆಡಿದ್ದು ಉತ್ತಮ ಅನುಭವ. ಇದರಿಂದ ತಂಡದ ಗೆಲುವಿನ ಅವಕಾಶ ಹೆಚ್ಚಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.