ADVERTISEMENT

ವಾಷಿಂಗ್ಟನ್ ಸುಂದರ್ ಕೈಚಳಕಕ್ಕೆ ಕಿವೀಸ್ ‘ವಾಷ್ ಔಟ್‌’: ಬ್ಯಾಟರ್‌ಗಳ ಕಾಡಿದ ಬೌಲರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2024, 11:47 IST
Last Updated 24 ಅಕ್ಟೋಬರ್ 2024, 11:47 IST
<div class="paragraphs"><p>ವಾಷಿಂಗ್ಟನ್‌ ಸುಂದರ್</p></div>

ವಾಷಿಂಗ್ಟನ್‌ ಸುಂದರ್

   

– ಪಿಟಿಐ ಚಿತ್ರ

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತದ ವಾಷಿಂಗ್ಟನ್ ಸುಂದರ್ ಕಿವೀಸ್ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು. ಏಳು ವಿಕೆಟ್ ಕಿತ್ತು ನ್ಯೂಜಿಲೆಂಡ್‌ನ ರನ್ ಗಳಿಕೆಗೆ ಕಡಿವಾಣ ಹಾಕಿದರು. ಆ ಮೂಲಕ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದನ್ನು ಸಮರ್ಥಿಸಿಕೊಂಡರು.

ADVERTISEMENT

ಎರಡನೇ ಟೆಸ್ಟ್ ಪಂದ್ಯದಲ್ಲಿ ಕುಲದೀ‍ಪ್ ಯಾದವ್ ಅವರ ಬದಲಿಗೆ ಸುಂದರ್‌ಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸೇರಿದಂತೆ ಹಲವರಿಂದ ಟೀಕೆಗಳೂ ಕೇಳಿಬಂದವು. ಆದರೆ 7 ವಿಕೆಟ್ ಪಡೆಯುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಸೋತ ಬೆನ್ನಲ್ಲೇ, ಸುಂದರ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ಎರಡನೇ ಪಂದ್ಯದಲ್ಲಿ ಆಡುವ ಬಳಗದಲ್ಲೂ ಅವಕಾಶ ನೀಡಲಾಯಿತು. ಸುಂದರ್ ಬದಲಿಗೆ ಅಕ್ಷರ್ ಅವರನ್ನು ಆಯ್ಕೆ ಮಾಡಬಹುದಿತ್ತು ಎನ್ನುವ ಚರ್ಚೆಗಳಿಗೆ ಸಾಮಾಜಿಕ ಜಾಲತಾಣ ವೇದಿಕೆಯಾಯಿತು. ಈಗ ಅದೇ ವೇದಿಕೆಯಲ್ಲಿ ಸುಂದರ್ ಗುಣಗಾನ ನಡೆಯುತ್ತಿದೆ.

ತಮ್ಮ 23.1 ಓವರ್‌ಗಳ ಸ್ಪೆಲ್‌ನಲ್ಲಿ 59 ರನ್‌ಗಳಿಗೆ 7 ವಿಕೆಟ್ ಬಾಚಿಕೊಂಡರು. ಪರಿಣಾಮ ನ್ಯೂಜಿಲೆಂಡ್ 259 ರನ್‌ಗಳಿಗೆ ಸರ್ವಪತನ ಕಂಡಿತು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಜೀವಮಾನದ ಸಾಧನೆ.

ಮೊದಲ ಸೆಷನ್‌ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಸುಂದರ್‌, ಎರಡನೇ ಸೆಷನ್‌ನಲ್ಲಿ ಕಿವೀಸ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 65 ರನ್‌ಗಳಿಸಿ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ರಚಿನ್ ರವೀಂದ್ರ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಅದು ನ್ಯೂಜಿಲೆಂಡ್ ಪತನಕ್ಕೆ ಮುನ್ನುಡಿ ಬರೆಯಿತು.

ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್, ಗ್ಲೆನ್ ಫಿಲಿಪ್ಸ್, ಸ್ಯಾಂಟ್ನರ್, ಟೀಮ್ ಸೌಥಿ, ಅಜಾಜ್ ಪಟೇಲ್‌ ಅವರು ಸುಂದರ್ ಕೈಚಳಕಕ್ಕೆ ಬಲಿಯಾದರು. ಉಳಿದ ಮೂರು ವಿಕೆಟ್ ಅಶ್ವಿನ್ ಪಾಲಾದವು.

ಕೊನೆಯ ಏಳು ವಿಕೆಟ್‌ಗಳು ಕೇವಲ 62ರನ್‌ಗಳಲ್ಲಿ ಬಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.