ನ್ಯೂಯಾರ್ಕ್: ಜಸ್‌ಪ್ರೀತ್ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಚಾಣಾಕ್ಷ ಬೌಲಿಂಗ್ ಮುಂದೆ ಪಾಕಿಸ್ತಾನ ತಂಡದ ಆಟ ನಡೆಯಲಿಲ್ಲ.
ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 6 ರನ್‌ಗಳಿಂದ ರೋಚಕ ಜಯ ಸಾಧಿಸಿತು. ಮಳೆಯಿಂದಾಗಿ ಸುಮಾರು ಒಂದು ಗಂಟೆಯಷ್ಟು ತಡವಾಗಿ ಪಂದ್ಯ ಆರಂಭವಾಯಿತು.
ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಸೀಂ ಶಾ (21ಕ್ಕೆ3) ಮತ್ತು ಹ್ಯಾರಿಸ್ ರವೂಫ್ (21ಕ್ಕ3) ಅವರ ದಾಳಿಯ ಮುಂದೆ ಭಾರತ ತಂಡವು 19 ಓವರ್‌ಗಳಲ್ಲಿ 119 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ರಿಷಭ್ ಪಂತ್ (42; 31ಎ) ಹಾಗೂ ಅಕ್ಷರ್ ಪಟೇಲ್ (20; 18ಎ) ಅವರಿಬ್ಬರು ಮಾತ್ರ ಹೆಚ್ಚು ರನ್ ಗಳಿಸಿದರು. ಉಳಿದ ಬ್ಯಾಟರ್‌ಗಳು ವಿಫಲರಾದರು.
ಆದರೆ ಚೆಂಡು ಹೆಚ್ಚು ಪುಟಿಯದೇ ಅನಿರೀಕ್ಷಿತ ಬೌನ್ಸ್ ಮತ್ತು ತಿರುವುಗಳಿಂದ ಬ್ಯಾಟರ್‌ಗಳಿಗೆ ಸವಾಲಾಗಿದ್ದ ಪಿಚ್‌ನಲ್ಲಿ ಭಾರತದ ಬೌಲರ್‌ಗಳೂ ಮಿಂಚಿದರು. ಗುರಿ ಬೆನ್ನಟ್ಟಿದ ಪಾಕ್ ತಂಡವನ್ನು ಕಟ್ಟಿಹಾಕಿದರು. ಬೂಮ್ರಾ (14ಕ್ಕೆ3) ಹಾಗೂ ಪಾಂಡ್ಯ (24ಕ್ಕೆ2) ಅವರ ಅಮೋಘ ಬೌಲಿಂಗ್‌ನಿಂದಾಗಿ ಪಾಕ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 113 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಪಾಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಐದನೇ ಓವರ್‌ನಲ್ಲಿ ಬೂಮ್ರಾ ಎಸೆತದಲ್ಲಿ ಬಾಬರ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.
ಈ ಹಂತದಲ್ಲಿ ಉಸ್ಮಾನ್ ಖಾನ್ ಮತ್ತು ರಿಜ್ವಾನ್ ಅವರ ಎರಡನೇ ವಿಕೆಟ್ ಜೊತೆಯಾಟದಲ್ಲಿ 31 ರನ್‌ಗಳು ಬಂದವು. ಆದರೆ ರನ್ ಗಳಿಕೆಯ ವೇಗ ಹೆಚ್ಚಿರಲಿಲ್ಲ. ಈ ಜೊತೆಯಾಟಕ್ಕೆ 11ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ತಡೆಯೊಡ್ಡಿದರು. ಇಮಾದ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.
ಇದಾದ ನಂತರ ಹಾರ್ದಿಕ್ ಪಾಂಡ್ಯ ಮತ್ತು ಬೂಮ್ರಾ ಅವರು ಪಾಕ್ ಬ್ಯಾಟಿಂಗ್ ಪಡೆಗೆ ದುಃಸ್ವಪ್ನದಂತೆ ಕಾಡಿದರು. 30 ರನ್‌ಗಳ ಅಂತರದಲ್ಲಿ ಪಾಕ್ ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಅದರಲ್ಲೂ 15ನೇ ಓವರ್‌ನ ಮೊದಲ ಎಸೆತದಲ್ಲಿಯೇ ಬೂಮ್ರಾ ಅವರು ರಿಜ್ವಾನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ್ದು ಭಾರತದ ಗೆಲುವಿನ ಸಾಧ್ಯತೆ ಹೆಚ್ಚಿಸಿತು.
ಅಲ್ಲದೇ ವಿಕೆಟ್‌ಕೀಪರ್ ರಿಷಭ್ ಪಂತ್ ಅವರ ಚುರುಕಾದ ಆಟವೂ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿತು. ಅವರು ಪಡೆದ ಮೂರು ಕ್ಯಾಚ್‌ಗಳು ಗಮನಸೆಳೆದವು.
ಟೂರ್ನಿಯಲ್ಲಿ ಭಾರತಕ್ಕೆ ಇದು ಎರಡನೇ ಗೆಲುವು. ಪಾಕ್ ತಂಡಕ್ಕೆ ಸತತ ಎರಡನೇ ಸೋಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.