ADVERTISEMENT

IND Vs SA: ಎರಡನೇ ಟಿ-20 ಪಂದ್ಯಕ್ಕೂ ಮಳೆಯ ಭೀತಿ

ಪಿಟಿಐ
Published 11 ಡಿಸೆಂಬರ್ 2023, 14:34 IST
Last Updated 11 ಡಿಸೆಂಬರ್ 2023, 14:34 IST
<div class="paragraphs"><p>ಮಳೆಗೆ ಆಹುತಿಯಾಗಿದ್ದ ಮೊದಲ ಪಂದ್ಯ</p></div>

ಮಳೆಗೆ ಆಹುತಿಯಾಗಿದ್ದ ಮೊದಲ ಪಂದ್ಯ

   

– ರಾಯಿಟರ್ಸ್ ಚಿತ್ರ

ಗೆಬೆರ್ಹಾ (ದಕ್ಷಿಣ ಆಫ್ರಿಕಾ): ಮೊದಲ ಬಾರಿ ಭಾರತ ತಂಡದೊಡನೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿರುವ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಈಗ ಸೀಮಿತ ಅವಕಾಶಗಳಷ್ಟೇ ಇವೆ. ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ಭಾನುವಾರ ಮೊದಲ ಟಿ20 ಪಂದ್ಯ ಮಳೆಗೆ ಕೊಚ್ಚಿಹೋಗಿದ್ದು, ಮಂಗಳವಾರ ಎರಡನೇ ಪಂದ್ಯವಾದರೂ ನಡೆಯಲಿ ಎಂದು ಹಾರೈಸಬೇಕಾಗಿದೆ.

ADVERTISEMENT

ಆದರೆ ಮೂರು ಪಂದ್ಯಗಳ ಸರಣಿಯ ಈ ಪಂದ್ಯಕ್ಕೂ ಮಳೆಯಾಗಬಹುದೆಂಬ ಮುನ್ಸೂಚನೆಯಿದೆ. ಬರುವ ಜೂನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಮೊದಲು ಭಾರತಕ್ಕೆ ಒಟ್ಟು ಐದು ಚುಟುಕು ಕ್ರಿಕೆಟ್‌ ಪಂದ್ಯಗಳಷ್ಟೇ ಆಡಲು ಇದೆ. ಹೀಗಾಗಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿರುವ ‘ಚಿಂತಕರ ಚಾವಡಿ’ಯ ಮುಂದೆ ಸವಾಲು ಇದೆ.

ಜನವರಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಭಾರತ ತಂಡ ಮೂರು ಟಿ20 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಪ್ರಸಕ್ತ ಸನ್ನಿವೇಶದಲ್ಲಿ  ಐಪಿಎಲ್‌ಗೂ ಮಹತ್ವ ಬರಲಿದೆ. ಅಲ್ಲಿ ಆಟಗಾರರ ಫಾರ್ಮ್‌, ದೈಹಿಕ ಕ್ಷಮತೆ ನೋಡಿಕೊಂಡು ವೆಸ್ಟ್‌ ಇಂಡೀಸ್‌– ಅಮೆರಿಕದಲ್ಲಿ ನಡೆಯುವ ವಿಶ್ವಕಪ್‌ಗೆ ತಂಡ ರೂಪಿಸಬೇಕಾಗುತ್ತದೆ.

ಈ ಪ್ರವಾಸಕ್ಕೆ 17 ಆಟಗಾರರ ತಂಡ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಎರಡೇ ಪಂದ್ಯ ಉಳಿದಿರುವ ಕಾರಣ ಎಲ್ಲರಿಗೂ ಅವಕಾಶ ಸಿಗುವ ಸಾಧ್ಯತೆ ಕ್ಷೀಣವಾಗಿದೆ. ಈಗ ಇರುವ ಆಟಗಾರರಲ್ಲಿ ಶುಭಮನ್ ಗಿಲ್‌, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರು ಬ್ಯಾಟರ್‌ಗಳಾಗಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ. ಗಿಲ್ ಅವರು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ಸರಣಿಗೆ ವಿಶ್ರಾಂತಿ ಪಡೆದಿದ್ದು, ಸೂರ್ಯಕುಮಾರ್ ಯಾದವ್ ತಂಡ ಮುನ್ನಡೆಸಿದ್ದರು.

ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ ಗಾಯಕವಾಡ್ ಅವರು ಸಾಕಷ್ಟು ರನ್ ಗಳಿಸಿದ್ದಾರೆ. ಆದರೆ ವಿಶ್ವಕಪ್‌ಗೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಲಭ್ಯರಿರುವುದಾದರೆ ಯುವ ಆಟಗಾರರಿಗೆ ಸ್ಥಾನ ಸಿಗುವುದು ಕಷ್ಟ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಆಯ್ಕೆಗಾರರೆದುರು ಸಾಮರ್ಥ್ಯ ತೋರುವ ಸವಾಲು ಅವರ ಮುಂದಿರಲಿದೆ.

ರಿಂಕು ಅವರಂತೆ ಜೀತೇಶ್ ಅವರೂ ಚುಟುಕು ಕ್ರಿಕೆಟ್‌ನಲ್ಲಿ ‘ಫಿನಿಷರ್’ ಪಾತ್ರ ನಿರ್ವಹಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಅವಕಾಶ ಸಿಗಬಹುದೆಂಬ ವಿಶ್ವಾಸದಲ್ಲಿ ಅವರಿದ್ದಾರೆ.

ದಕ್ಷಿಣ ಆಫ್ರಿಕಾ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಪುಟಿದೇಳುವುದರಿಂದ ಯುವ ಬ್ಯಾಟರ್‌ಗಳಿಗೆ ಸವಾಲಾಗಲಿದೆ.

ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಮತ್ತು ಬೂಮ್ರಾ ಅವರು ಆಯ್ಕೆಯಾಗಬಹುದು. ಈ ಸರಣಿಯಲ್ಲಿ ಬೂಮ್ರಾ ಆಡುತ್ತಿಲ್ಲ. ದೀಪಕ್ ಚಾಹರ್ ವೈಯಕ್ತಿಕ ಕಾರಣಗಳಿಂದ ತಂಡ ಸೇರಿಕೊಂಡಿಲ್ಲ. ಸ್ಪಿನ್ನರ್‌ಗಳಾದ ಕುಲದೀಪ್ ಸಿಂಗ್ ಮತ್ತು ರವಿ ಬಿಷ್ಣೋಯಿ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧ ಗಮನ ಸೆಳೆದಿದ್ದಾರೆ.

ಭಾರತದ ರೀತಿಯಲ್ಲೇ ದಕ್ಷಿಣ ಆಫ್ರಿಕಾ ತಂಡಕ್ಕೂ, ವಿಶ್ವಕಪ್‌ಗೆ ಮುನ್ನ ಐದೇ ಟಿ20 ಪಂದ್ಯಗಳು ಉಳಿದಿವೆ.

ತಂಡಗಳು:

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಋತುರಾಜ ಗಾಯಕವಾಡ್, ತಿಲಕ್ ವರ್ಮಾ, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಜೀತೇಶ್ ಶರ್ಮ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ (ಉಪನಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ದೀಪಕ್ ಚಾಹರ್.

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ), ಬಾರ್ಟ್‌ಮನ್‌, ಮ್ಯಾಥ್ಯೂ ಬ್ರೀಟ್‌ಝ್ಕೆ, ನಾಂಡ್ರೆ ಬರ್ಗರ್, ಜೆರಾಲ್ಡ್‌ ಕೋಝಿ, ಡೊನವನ್ ಫೆರೀರಾ, ರೀಝಾ ಹೆಂಡ್ರಿಕ್ಸ್‌, ಮಾರ್ಕೊ ಜಾನ್ಸೆನ್‌, ಹೆನ್ರಿಚ್‌ ಕ್ಲಾಸೆನ್, ಕೇಶವ ಮಹಾರಾಜ್, ಡೇವಿಡ್ ಮಿಲ್ಲರ್, ಆ್ಯಂಡಿಲೆ ಪಿಶುವಾಹೊ, ತಬ್ರೇಜ್‌ ಶಂಶಿ, ಟ್ರಿಸ್ಟಾನ್ ಸ್ಟಬ್ಸ್‌ ಮತ್ತು ಲಿಝಾರ್ಡ್‌ ವಿಲಿಯಮ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.