ಕೇಪ್‌ಟೌನ್: ಭಾರತ ಕ್ರಿಕೆಟ್ ತಂಡದ ವೇಗಿಗಳ ಶಿಸ್ತಿನ ದಾಳಿಗೆ ಬೆದರಿದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳ ಆಟ, ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 23.2 ಓವರ್‌ಗಳಲ್ಲೇ ಅಂತ್ಯವಾಯಿತು. ಆತಿಥೇಯ ತಂಡವನ್ನು ಕೇವಲ 55 ರನ್‌ಗಳಿಗೆ ಕಟ್ಟಿ ಹಾಕಿದ ರೋಹಿತ್ ಶರ್ಮಾ ಪಡೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಲೆಕ್ಕಾಚಾರವನ್ನು ವೇಗಿ ಮೊಹಮ್ಮದ್ ಸಿರಾಜ್ ತಲೆಕೆಳಗಾಗಿಸಿದರು. 'ಹರಿಣ'ಗಳ ಪಡೆ ಮೇಲೆ ಬಿರುಗಾಳಿಯಂತೆ ಎರಗಿದ ಅವರು, 9 ಓವರ್‌ಗಳಲ್ಲಿ 15 ರನ್ ನೀಡಿ ಪ್ರಮುಖ ಆರು ವಿಕೆಟ್‌ಗಳನ್ನು ಕಬಳಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಸಲ ಐದು ವಿಕೆಟ್ ಗೊಂಚಲು ಜೇಬಿಗಿಳಿಸಿಕೊಂಡ ಬಲಗೈ ವೇಗಿ, ಎದುರಾಳಿ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾದರು. ತಲಾ ಎರಡು ವಿಕೆಟ್ ಹಂಚಿಕೊಂಡ ವೇಗಿ ಜಸ್‌ಪ್ರಿತ್ ಬೂಮ್ರಾ ಮತ್ತು ಮುಕೇಶ್ ಕುಮಾರ್ ಅವರು ಸಿರಾಜ್‌ಗೆ ಉತ್ತಮ ಸಹಕಾರ ನೀಡಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಡೇವಿಡ್ ಬೆಡಿಂಗ್‌ಹ್ಯಾಮ್ (12) ಮತ್ತು ಕೈಲ್ ವೆರೆಯನ್ (15) ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟರ್‌ಗೆ ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಭಾರತದ ವಿರುದ್ಧ ಕನಿಷ್ಠ ಮೊತ್ತ
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ವಿರುದ್ಧ ಯಾವುದೇ ತಂಡವು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರಲಿಲ್ಲ. 2021ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 62 ರನ್‌ಗಳಿಗೆ ಸರ್ವಪತನ ಕಂಡದ್ದು ಇದುವರೆಗೆ ಕನಿಷ್ಠ ಮೊತ್ತವಾಗಿತ್ತು.
2015ರಲ್ಲಿ ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 79 ರನ್‌ಗಳಿಗೆ, 2021ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 81 ರನ್‌ಗಳಿಗೆ ಹಾಗೂ 1990ರಲ್ಲಿ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 82 ರನ್ ಗಳಿಗೆ ಆಲೌಟ್ ಆಗಿತ್ತು.
ಭಾರತ ಪರ ಅತ್ಯುತ್ತಮ ಬೌಲಿಂಗ್
ಆರು ವಿಕೆಟ್‌ಗಳನ್ನು ಕಬಳಿಸಿದ ಸಿರಾಜ್, ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಭಾರತ ಪರ ಉತ್ತಮ ಬೌಲಿಂಗ್ ಸಾಧನೆ ತೋರಿದ ಮೂರನೇ ಬೌಲರ್ ಎನಿಸಿಕೊಂಡರು. 2022ರಲ್ಲಿ ಜೋಹಾನ್‌ಬರ್ಗ್ ಟೆಸ್ಟ್‌ನಲ್ಲಿ 61 ರನ್ ನೀಡಿ 7 ವಿಕೆಟ್ ಪಡೆದಿದ್ದ ಶಾರ್ದೂಲ್ ಠಾಕೂರ್ ಮತ್ತು 2011ರಲ್ಲಿ ಕೇಪ್‌ಟೌನ್ ಟೆಸ್ಟ್‌ನಲ್ಲಿ 120 ರನ್ ನೀಡಿ 7 ವಿಕೆಟ್ ಪಡೆದಿದ್ದ ಹರ್ಭಜನ್ ಸಿಂಗ್ ಅವರು ಸಿರಾಜ್‌ಗಿಂತ ಮೇಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.