ಜೋಹಾನೆಸ್‌ಬರ್ಗ: ಸಿಡಿಲುಮರಿಗಳಂತೆ ಅಬ್ಬರಿಸಿದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಬ್ಯಾಟಿಂಗ್‌ಗೆ ಆತಿಥೇಯ ದಕ್ಷಿಣ ಆಫ್ರಿಕಾದ ಆಟಗಾರರು ಬೆಚ್ಚಿಬಿದ್ದರು.
ಆತಿಥೇಯ ತಂಡವು 135 ರನ್‌ಗಳ ಭಾರಿ ಅಂತರದಿಂದ ಸೋತಿತು. ಭಾರತ ತಂಡವು 3–1ರಿಂದ ಸರಣಿ ಜಯಿಸಿತು.
ಶುಕ್ರವಾರ ರಾತ್ರಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ (ಅಜೇಯ 109; 56ಎ, 4X6, 6X9) ಮತ್ತು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ವರ್ಮಾ (ಅಜೇಯ 120; 47ಎ, 4X9, 6X10) ಅವರು ತಮ್ಮಲ್ಲಿಯೇ ಪೈಪೋಟಿಗೆ ಬಿದ್ದವರಂತೆ ಬ್ಯಾಟ್ ಬೀಸಿದರು. ಇವರಿಬ್ಬರೂ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 210 ರನ್‌ಗಳಿಂದಾಗಿ ತಂಡವು 20 ಓವರ್‌ಗಳಲ್ಲಿ 1 ವಿಕೆಟ್‌ಗೆ 283 ರನ್‌ಗಳ ಮೊತ್ತ ಗಳಿಸಿತು.
ಅದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು 18.2 ಓವರ್‌ಗಳಲ್ಲಿ 148 ರನ್ ಗಳಿಸಿ ಸೋತಿತು. ಅರ್ಷದೀಪ್ ಸಿಂಗ್ (20ಕ್ಕೆ3) ಉತ್ತಮ ಬೌಲಿಂಗ್ ಮಾಡಿದರು.ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸಂಜು ಮತ್ತು ಅಭಿಷೇಕ್ ಅವರು ಉತ್ತಮ ನೀಡಿದರು. ಪವರ್‌ಪ್ಲೇನಲ್ಲಿ 73 ರನ್‌ಗಳು ಹರಿದು ಬಂದವು. 6ನೇ ಓವರ್‌ನಲ್ಲಿ ಅಭಿಷೇಕ್ ಅವರು ಸಿಪಾಮ್ಲಾ ಬೌಲಿಂಗ್‌ನಲ್ಲಿ ಕ್ಲಾಸನ್‌ಗೆ ಕ್ಯಾಚಿತ್ತರು. ಇಲ್ಲಿಂದ ತಿಲಕ್ ಮತ್ತು ಸಂಜು ಅಬ್ಬರದ ಆಟ ರಂಗೇರಿತು.
ಅಭಿಷೇಕ್ ಶರ್ಮಾ ಔಟಾದಾಗ ಸಂಜು 17 ಎಸೆತಗಳಲ್ಲಿ 28 ರನ್ ಗಳಿಸಿ ಆಡುತ್ತಿದ್ದರು. ಆಗ ಕ್ರೀಸ್‌ಗೆ ಬಂದ ವರ್ಮಾ ಬೌಲರ್‌ಗಳನ್ನು ದಂಡಿಸಿದರು. ಅವರ ಆಟವು ಸಂಜು ಬ್ಯಾಟಿಂಗ್‌ಗಿಂತ ವೇಗವಾಗಿತ್ತು. ಸಂಜು 93 ರನ್ ಗಳಿಸಿದಾಗ, ವರ್ಮಾ ಕೂಡ ಅಷ್ಟೇ ರನ್ ಸೇರಿಸಿದ್ದರು. ಸಂಜು ಶತಕ ಪೂರೈಸಿದ ಮೂರು ಎಸೆತಗಳ ನಂತರ ತಾವೂ ನೂರರ ಗಡಿ ಮುಟ್ಟಿ ಸಂಭ್ರಮಿಸಿದರು.
ಈ ಸರಣಿಯಲ್ಲಿ ಸಂಜುಗೆ ಇದು ಎರಡನೇ ಶತಕ. ಅವರು ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ತಿಲಕ್ ಅವರಿಗೆ ಸತತ ಎರಡನೇ ಮೂರಂಕಿ ಮೊತ್ತದ ಸಾಧನೆ ಇದಾಗಿದೆ. ಕಳೆದ ಪಂದ್ಯದಲ್ಲಿಯೂ ಅವರು ಅಬ್ಬರದ ಶತಕ ಬಾರಿಸಿದ್ದರು.
ತಿಲಕ್ ಅವರು 255ರ ಸ್ಟ್ರೈಕ್‌ರೇಟ್ ನಲ್ಲಿ ಬ್ಯಾಟ್ ಬೀಸಿದರು. ಸಂಜು ಶತಕದಂಚಿನಲ್ಲಿ ಒಂಚೂರು ವೇಗ ತಗ್ಗಿಸಿದರು. ಅದರಿಂದಾಗಿ 194ರ ಸ್ಟ್ರೈಕ್‌ರೇಟ್ ಅವರದ್ದಾಯಿತು. ಆತಿಥೇಯ ತಂಡದ ಮಾರ್ಕೊ ಯಾನ್ಸೆನ್ ಬಿಟ್ಟರೆ ಉಳಿದೆಲ್ಲ ಬೌಲರ್‌ಗಳೂ ಭಾರಿ ದುಬಾರಿಯಾದರು. ಒತ್ತಡಕ್ಕೊಳಗಾದ ಫೀಲ್ಡರ್‌ಗಳೂ ವರ್ಮಾ ಅವರ 3 ಕ್ಯಾಚ್‌ಗಳನ್ನು ಕೈಚೆಲ್ಲಿದರು.
ಗುರಿ ಬೆನ್ನಟ್ಟಿದ ಆತಿಥೇಯ ತಂಡದ ಬ್ಯಾಟರ್‌ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. ಟ್ರಸ್ಟನ್ ಸ್ಟಬ್ಸ್ (43 ರನ್) ಮತ್ತು ಡೇವಿಡ್ ಮಿಲ್ಲರ್ (36 ರನ್) ಒಂದಿಷ್ಟು ಹೊತ್ತು ಹೋರಾಟ ಮಾಡಿದರು. ಇದರಿಂದಾಗಿ ತಂಡವು ಇನ್ನೂ ಕಡಿಮೆ ಮೊತ್ತಕ್ಕೆ ಕುಸಿಯುವುದು ತಪ್ಪಿತು.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 1 ವಿಕೆಟ್‌ಗೆ 283 (ಸಂಜು ಸ್ಯಾಮ್ಸನ್ ಔಟಾಗದೆ 109, ಅಭಿಷೇಕ್ ಶರ್ಮಾ 36, ತಿಲಕ್ ವರ್ಮಾ ಔಟಾಗದೆ 120, ಲುಥೊ ಸಿಪಾಮ್ಲಾ 58ಕ್ಕೆ1)
ದಕ್ಷಿಣ ಆಫ್ರಿಕಾ: 18.2 ಓವರ್‌ಗಳಲ್ಲಿ 148 (ಟ್ರಸ್ಟನ್ ಸ್ಟಬ್ಸ್ 43, ಡೇವಿಡ್ ಮಿಲ್ಲರ್ 36, ಮಾರ್ಕೊ ಯಾನ್ಸೆನ್ 29, ಅರ್ಷದೀಪ್ ಸಿಂಗ್ 20ಕ್ಕೆ3, ವರುಣ ಚಕ್ರವರ್ತಿ 42ಕ್ಕೆ2, ಅಕ್ಷರ್ ಪಟೇಲ್ 6ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 135 ರನ್ ಜಯ. ಸರಣಿಯಲ್ಲಿ 3–1ರಿಂದ ಜಯ. ಪಂದ್ಯ ಹಾಗೂ ಸರಣಿ ಶ್ರೇಷ್ಠ: ತಿಲಕ್ ವರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.