ADVERTISEMENT

IND vs SA: ಸರಣಿ ಗೆಲುವಿನತ್ತ ಭಾರತದ ಚಿತ್ತ

ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಟಿ20 ಪಂದ್ಯ ಇಂದು* ರಿಂಕು ಸಿಂಗ್ ಆಟದ ಮೇಲೆ ಗಮನ

ಪಿಟಿಐ
Published 15 ನವೆಂಬರ್ 2024, 0:21 IST
Last Updated 15 ನವೆಂಬರ್ 2024, 0:21 IST
ರಿಂಕು ಸಿಂಗ್‌
ರಿಂಕು ಸಿಂಗ್‌    

ಜೊಹಾನೆಸ್‌ಬರ್ಗ್‌: ಭಾರತ ತಂಡ ಶುಕ್ರವಾರ ನಡೆಯುವ ಟಿ20 ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಕೆಲವೇ ಸಮಯದ ಹಿಂದೆ ‘ಫಿನಿಷರ್’ ಎನಿಸಿಕೊಂಡಿದ್ದ ರಿಂಕು ಸಿಂಗ್ ಅವರ ಕಳಪೆ ಫಾರ್ಮ್ ತಂಡದ ಚಿಂತೆಗೆ ಕಾರಣವಾಗಿದೆ.

ಎರಡೂ ತಂಡಗಳ ಬ್ಯಾಟಿಂಗ್ ಸ್ವಲ್ಪ ಸಪ್ಪೆಯೆನಿಸಿರುವ ನಡುವೆಯೇ ಸಂಜು ಸ್ಯಾಮ್ಸನ್ ಮತ್ತು ತಿಲಕ್‌ ವರ್ಮಾ ಶತಕಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ. ಗುರುವಾರ ಮೂರನೇ ಪಂದ್ಯವನ್ನು 11 ರನ್‌ಗಳಿಂದ ಗೆದ್ದ ಭಾರತ ಸರಣಿಯಲ್ಲಿ 2–1 ಮುನ್ನಡೆ ಸಾಧಿಸಿದೆ. ಬ್ಯಾಟರ್‌ಗಳಿಂದ ಸಾಂಘಿಕ ಪ್ರಯತ್ನ ನಡೆದರೆ ಭಾರತ 3–1 ರಿಂದ ಸರಣಿ ಗೆಲ್ಲುವ ಅವಕಾಶ ಹೊಂದಿದೆ.

‘ವಾಂಡರರ್ಸ್‌’ ಕ್ರೀಡಾಂಗಣ ಭಾರತಕ್ಕೆ ಸವಿನೆನಪುಗಳ ತಾಣ. ಇಲ್ಲಿಯೇ ಭಾರತ 2007ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿತ್ತು. ನಾಯಕ ಸೂರ್ಯಕುಮಾರ್, ವರ್ಷದ ಹಿಂದೆ ನಡೆದ ಟಿ20 ಸರಣಿಯಲ್ಲಿ ತಮ್ಮ ಕೊನೆಯ ಶತಕ ಹೊಡೆದಿದ್ದರು. ಭಾರತ ಜಯಗಳಿಸಿತ್ತು ಕೂಡ. ಮೂರು ಪಂದ್ಯಗಳ ಆ ಸರಣಿ 1–1 ಸಮನಾಗಿದ್ದು, ಒಂದು ಪಂದ್ಯ ಮಳೆಯ ಪಾಲಾಗಿತ್ತು.

ADVERTISEMENT

ಸೂರ್ಯ ನಾಯಕತ್ವದಲ್ಲಿ ಭಾರತದ ಗೆಲುವಿನ ಪ್ರಮಾಣ ಶೇ 81.25ರಷ್ಟು ಇದೆ. ಅವರ ನೇತೃತ್ವದಲ್ಲಿ 16 ಪಂದ್ಯಗಳಲ್ಲಿ 13ರಲ್ಲಿ ಜಯಗಳಿಸಿದೆ.

ರಿಂಕುಗೆ ಸವಾಲು:

ಟಿ20 ಕ್ರಿಕೆಟ್‌ ತಾರೆಗಳಲ್ಲಿ ಒಬ್ಬರಾಗಿ ಉದಯಿಸಿದ್ದ ರಿಂಕು ಸಿಂಗ್ ಅವರ ಆಟದ ಮಟ್ಟ ಕೆಲವು ತಿಂಗಳಿಂದ ಹಠಾತ್ತನೇ ಕುಸಿದಿದಿದ್ದು ಕಳವಳಕ್ಕೆ ಕಾರಣವಾಗಿದೆ. ಬ್ಯಾಟಿಂಗ್ ಕ್ರಮಾಂಕ ಆರು ಮತ್ತು ಏಳರಲ್ಲಿ ಬದಲಾಗುತ್ತಿರುವುದೂ ಅಲಿಗಢದ ಆಟಗಾರನಿಗೆ ಸಮಸ್ಯೆಯಾಗಿದೆ.

ಮೂರು ಪಂದ್ಯಗಳಲ್ಲಿ ಅವರು ಗಳಿಸಿರುವುದು 11, 9 ಮತ್ತು 8 ರನ್‌. ಎರಡು ಪಂದ್ಯಗಳಲ್ಲಿ ಆರನೇ ಕ್ರಮಾಂಕದಲ್ಲಿ, ಒಂದರಲ್ಲಿ ಏಳನೇ ಕ್ರಮಾಂಕದಲ್ಲಿ ಆಡಿದ್ದಾರೆ. ಮೊದಲ ಬೌಂಡರಿ ಗಳಿಸಲೂ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಅವರು ಮೊದಲಿನಂತೆ ಆಕ್ರಮಣಕಾರಿಯಾಗಿ ಕಾಣುತ್ತಿಲ್ಲ.

ಸಂಜು ಸ್ಯಾಮ್ಸನ್‌ ಆರಂಭ ಆಟಗಾನಾಗಿ, ತಿಲಕ್‌ ವರ್ಮಾ ಮೂರನೇ ಕ್ರಮಾಂಕದಲ್ಲಿ ಮತ್ತು ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿರುವ ಕಾರಣ ರಿಂಕು ಕೆಳಕ್ರಮಾಂಕದಲ್ಲಿ ಆಡಬೇಕಾಗಿದೆ. ತಂಡದ ಚಿಂತಕರ ಚಾವಡಿ ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಸಬೇಕಾಗಿದೆ.

ಭಾರತ ಮೊದಲೆರಡು ಪಂದ್ಯಗಳಿಗೆ 15 ಆಟಗಾರರಲ್ಲಿ 12 ಆಟಗಾರರನ್ನು ಬಳಸಿಕೊಂಡಿದೆ. ಪದಾರ್ಪಣೆಗೆ ಕಾಯುತ್ತಿರುವ ಇಬ್ಬರು ವೇಗದ ಬೌಲರ್‌ಗಳಾದ ಯಶ್‌ ದಯಾಳ್ ಅಥವಾ ವೈಶಾಖ ವಿಜಯಕುಮಾರ್ ಅವರು ಅವಕಾಶ ಪಡೆಯುವರೇ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ. ರಮಣದೀಪ್ ಸಿಂಗ್ ಕೂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉಪಯುಕ್ತ ಪಾತ್ರ ವಹಿಸಬಲ್ಲವರಾಗಿದ್ದು ಅವರೂ ಅವಕಾಶಕ್ಕೆ ಎದುರುನೋಡುತ್ತಿದ್ದಾರೆ.

ಪಂದ್ಯ ಆರಂಭ: ರಾತ್ರಿ 8.30.

ಅಭಿಷೇಕ್‌ ಶರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.