ಕೇಪ್‌ಟೌನ್: ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವಣ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲ ದಿನವೇ 23 ವಿಕೆಟ್‌ಗಳು ಪತನವಾಗಿವೆ.
ಇಲ್ಲಿನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಪಂದ್ಯದಲ್ಲಿ ಆಫ್ರಿಕಾ ಪಡೆಯನ್ನು ಕೇವಲ 55 ರನ್‌ಗಳಿಗೆ ಆಲೌಟ್ ಮಾಡಿದ ಭಾರತ ತಂಡ ಸಹ, 153 ರನ್‌ಗಳಿಗೆ ಸರ್ವಪತನ ಕಂಡಿದೆ. 98 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಆಫ್ರಿಕಾ, 62 ರನ್ ಆಗುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಮತ್ತೆ ಆಘಾತ ಅನುಭವಿಸಿದೆ.
ವೃತ್ತಿ ಜೀವನದ ಕೊನೇ ಟೆಸ್ಟ್ ಪಂದ್ಯ ಆಡುತ್ತಿರುವ ನಾಯಕ ಡೀನ್ ಎಲ್ಗರ್ (12), ಟೋನಿ ಡಿ ಝಾರ್ಜಿ (1), ಟ್ರಿಸ್ಟನ್ ಸ್ಟಬ್ಸ್ (1) ಔಟಾಗಿದ್ದಾರೆ. 36 ರನ್ ಗಳಿಸಿರುವ ಏಡನ್ ಮಾರ್ಕ್ರಂ ಹಾಗೂ 7 ರನ್ ಗಳಿಸಿರುವ ಡೇವಿಡ್ ಬೆಡಿಂಗ್‌ಹ್ಯಾಮ್ ಕ್ರೀಸ್‌ನಲ್ಲಿದ್ದಾರೆ. ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಆತಿಥೇಯ ತಂಡಕ್ಕೆ ಇನ್ನೂ 36 ರನ್‌ಗಳ ಅಗತ್ಯವಿದೆ.
ಮುಕೇಶ್ ಕುಮಾರ್ ಎರಡು ಹಾಗೂ ಜಸ್‌ಪ್ರಿತ್ ಬೂಮ್ರಾ ಒಂದು ವಿಕೆಟ್ ಪಡೆದಿದ್ದಾರೆ.
ನಾಟಕೀಯ ತಿರುವು
ಮೊದಲ ಇನಿಂಗ್ಸ್‌ನಲ್ಲಿ ಡೀನ್ ಎಲ್ಗರ್ ಪಡೆಯ ಅಲ್ಪ ಮೊತ್ತದೆದುರು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆದರೆ, ಬಳಿಕ ಬಂದ ಶುಭಮನ್ ಗಿಲ್, ನಾಯಕನೊಂದಿಗೆ ಸೇರಿ ಅರ್ಧಶತಕದ ಆಟವಾಡಿದರು.
ರೋಹಿತ್ 39 ರನ್ ಗಳಿಸಿದರೆ, ಗಿಲ್ ಆಟ 36ಕ್ಕೆ ಕೊನೆಗೊಂಡಿತು. ಬಳಿಕ ಬಂದ ವಿರಾಟ್ ಕೊಹ್ಲಿ, ಎಂದಿನ ಲಯದಲ್ಲಿ ಬ್ಯಾಟ್ ಬೀಸಿದರಾದರೂ 46 ರನ್ ಗಳಿಸಿದ್ದಾಗ ಔಟಾದರು. ಈ ಮೂವರು ಮಾತ್ರವೇ ಭಾರತದ ಪರ ಎರಡಂಕಿ ರನ್ ಗಳಿಸಿದರು. ಕೆ.ಎಲ್.ರಾಹುಲ್ 8 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಆರು ಬ್ಯಾಟರ್‌ಗಳು ಸೊನ್ನೆ ಸುತ್ತಿದರು.
ರೋಹಿತ್ ಪಡೆ 33 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತ್ತು. ಹೀಗಾಗಿ ಇನ್ನಷ್ಟು ರನ್ ಕಲೆಹಾಕಿ ಭಾರಿ ಮುನ್ನಡೆ ಸಾಧಿಸುವ ಯೋಜನೆಯಲ್ಲಿತ್ತು. ಆದರೆ, ಈ ಹಂತದಲ್ಲಿ ದಾಳಿಗಿಳಿದ ವೇಗಿ ಲುಂಗಿ ಗಿಡಿ, ಪ್ರವಾಸಿ ಪಡೆಯ ದಿಢೀರ್ ಕುಸಿತಕ್ಕೆ ಕಾರಣರಾದರು.
34ನೇ ಓವರ್‌ನ ಮೊದಲ ಎಸೆತದಲ್ಲಿ ಕೆ.ಎಲ್.ರಾಹುಲ್ ಅವರನ್ನು ಲುಂಗಿ ಔಟ್ ಮಾಡಿದರು. ಅದಾದ ಬಳಿಕ ಟೀಂ ಇಂಡಿಯಾ, ಒಂದೂ ರನ್ ಸೇರಿಸದೆ ಆಲೌಟ್ ಆಯಿತು.
ಬಾಲಂಗೋಚಿಗಳಾದ ಮೊಹಮ್ಮದ್ ಸಿರಾಜ್, ಜಸ್‌ಪ್ರಿತ್ ಬೂಮ್ರಾ, ಪ್ರಸಿದ್ಧ ಕೃಷ್ಣ ಅವರಷ್ಟೇ ಅಲ್ಲದೆ ರಾಹುಲ್, ಕೊಹ್ಲಿ, ರವೀಂದ್ರ ಜಡೇಜ ಅವರಂತಹ ಪ್ರಮುಖ ಬ್ಯಾಟರ್‌ಗಳೇ ಈ ಹಂತದಲ್ಲಿ ಔಟಾದದ್ದು ಅಚ್ಚರಿ ಮೂಡಿಸಿತು.
ಎಲ್ಗರ್ ಲೆಕ್ಕಾಚಾರ ತಲೆಕೆಳಗಾಗಿಸಿದ ಸಿರಾಜ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಫ್ರಿಕಾ ತಂಡದ ನಾಯಕ ಎಲ್ಗರ್ ಲೆಕ್ಕಾಚಾರವನ್ನು ವೇಗಿ ಮೊಹಮ್ಮದ್ ಸಿರಾಜ್ ತಲೆಕೆಳಗಾಗಿಸಿದರು. 'ಹರಿಣ'ಗಳ ಪಡೆ ಮೇಲೆ ಬಿರುಗಾಳಿಯಂತೆ ಎರಗಿದ ಅವರು, 9 ಓವರ್‌ಗಳಲ್ಲಿ 15 ರನ್ ನೀಡಿ ಪ್ರಮುಖ ಆರು ವಿಕೆಟ್‌ಗಳನ್ನು ಕಬಳಿಸಿದರು.
ವೃತ್ತಿ ಜೀನವದ ಎರಡನೇ ಟೆಸ್ಟ್ ಆಡುತ್ತಿರುವ ಮುಕೇಶ್ ಕುಮಾರ್ ಮತ್ತು ಬೂಮ್ರಾ ತಲಾ ಎರಡು ವಿಕೆಟ್ ಪಡೆದು ಸಂಭ್ರಮಿಸಿದರು. ಹೀಗಾಗಿ ಆತಿಥೇಯರ ಆಟ ಕೇವಲ 23.2 ಓವರ್‌ಗಳಲ್ಲೇ ಮುಗಿಯಿತು.
ಮೊದಲ ದಿನ ಹೆಚ್ಚು ವಿಕೆಟ್
ಟೆಸ್ಟ್ ಪಂದ್ಯವೊಂದರ ಮೊದಲ ದಿನವೇ 20ಕ್ಕಿಂತ ಹೆಚ್ಚು ವಿಕೆಟ್‌ಗಳು ಪತನವಾದದ್ದು ಇದೇ ಮೊದಲಲ್ಲ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು 1902ರಲ್ಲಿ ಮೆಲ್ಬರ್ನ್ ಅಂಗಳದಲ್ಲಿ ಮುಖಾಮುಖಿಯಾಗಿದ್ದಾಗ ಮೊದಲ ದಿನವೇ 25 ವಿಕೆಟ್‌ಗಳು ಪತನವಾಗಿದ್ದವು.
1890ರಲ್ಲಿ ಈ ತಂಡಗಳೇ ಇಂಗ್ಲೆಂಡ್‌ನ 'ದಿ ಓವಲ್' ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದ್ದಾಗ 22 ವಿಕೆಟ್‌ಗಳು ಉರುಳಿದ್ದವು. 1951ರಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅಡಿಲೇಡ್‌ನಲ್ಲಿ ಸೆಣಸಾಡಿದ್ದಾಗಲೂ ಇಷ್ಟೇ (22) ವಿಕೆಟ್‌ಗಳು ಬಿದ್ದಿದ್ದವು.
ಒಟ್ಟಾರೆ ಟೆಸ್ಟ್ ಪಂದ್ಯದ ಯಾವುದೇ ದಿನದಲ್ಲಿ ಹೆಚ್ಚು ವಿಕೆಟ್ ಉರುಳಿದ್ದು, 1888ರ ಲಾರ್ಡ್ ಟೆಸ್ಟ್‌ನಲ್ಲಿ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸಿದ್ದ ಆ ಪಂದ್ಯದ ಎರಡನೇ ದಿನ ಒಟ್ಟು 27 ವಿಕೆಟ್‌ಗಳು ಪತನವಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.