ADVERTISEMENT

ಸಂಜು–ತಿಲಕ್ ಆರ್ಭಟಕ್ಕೆ ಹರಿಣಗಳು ಹೈರಾಣ: ದಾಖಲೆಗಳ ಮೇಲೆ ದಾಖಲೆ ಬರೆದ ಭಾರತ

ಏಜೆನ್ಸೀಸ್
Published 16 ನವೆಂಬರ್ 2024, 2:25 IST
Last Updated 16 ನವೆಂಬರ್ 2024, 2:25 IST
<div class="paragraphs"><p>ಸಂಜು–ತಿಲಕ್</p></div>

ಸಂಜು–ತಿಲಕ್

   

ಜೋಹಾನೆಸ್‌ಬರ್ಗ್: ಸಿಡಿಲುಮರಿಗಳಂತೆ ಅಬ್ಬರಿಸಿದ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರ ಬ್ಯಾಟಿಂಗ್‌ಗೆ ಆತಿಥೇಯ ದಕ್ಷಿಣ ಆಫ್ರಿಕಾದ ಆಟಗಾರರು ಹೈರಾಣದರು. 

ಈ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಭಾರತ ತಂಡವು 135 ರನ್‌ಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿತು. ಹಾಗೂ 3–1ರಿಂದ ಸರಣಿ ಜಯಿಸಿತು.  

ADVERTISEMENT

ಶುಕ್ರವಾರ ರಾತ್ರಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ತಿಲಕ್ ವರ್ಮಾ ಅವರು ತಮ್ಮಲ್ಲಿಯೇ ಪೈಪೋಟಿಗೆ ಬಿದ್ದವರಂತೆ ಬ್ಯಾಟ್ ಬೀಸಿ ದಾಖಲೆಗಳ ಮೇಲೆ ದಾಖಲೆ ಬರೆದರು.

ಸಂಜು 56 ಎಸೆತಗಳಲ್ಲಿ ಅಜೇಯ 109 ರನ್‌ ಸಿಡಿಸಿದರು. ಇದರಲ್ಲಿ 9 ಸಿಕ್ಸರ್‌, 6 ಬೌಂಡರಿ ಇದ್ದವು. ವರ್ಮಾ ಕೂಡ 47 ಎಸೆತಗಳಲ್ಲಿ ಅಜೇಯ 120 ರನ್‌ ಚಚ್ಚಿದರು. ಇದರಲ್ಲಿ 10 ಸಿಕ್ಸರ್‌, 9 ಬೌಂಡರಿ ಇದ್ದವು.

ದಾಖಲೆಗಳ ಮೇಲೆ ದಾಖಲೆ...

* ಅಂತರರಾಷ್ಟ್ರೀಯ ಟಿ20 ಮಾದರಿಯ ಈ ಪಂದ್ಯದಲ್ಲಿ ಭಾರತ 283 ರನ್ ಕಲೆಹಾಕುವ ಮೂಲಕ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ.

* ಸಂಜು ಸ್ಯಾಮ್ಸನ್ ಒಂದು ವರ್ಷದಲ್ಲಿ 3 ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ದಾಖಲೆ ಬರೆದರು. ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಶತಕ ಹಾಗೂ ಇತ್ತೀಚೆಗೆ ಬಾಂಗ್ಲಾ ದೇಶದ ವಿರುದ್ಧ ಒಂದು ಶತಕ ಸಿಡಿಸಿದ್ದರು. 

* ಒಂದೇ ಸರಣಿಯಲ್ಲಿ ಎರಡು ಶತಕ ಸಿಡಿಸಿದ ದಾಖಲೆಗೂ ಸಂಜು ಬಾಜನರಾದರು.

* ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭರ್ಜರಿ ಶತಕ ಬಾರಿಸುವ ಮೂಲಕ ಒಂದೇ ಇನ್ನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಇದೇ ಮೊದಲು. ಇದು ಕೂಡ ದಾಖಲೆಯ ಪುಟಕ್ಕೆ ಸೇರ್ಪಡೆಯಾಯಿತು.

* ಸಂಜು ಸ್ಯಾಮ್ಸನ್‌ ಹಾಗೂ ತಿಲಕ್ ವರ್ಮಾ ಅಜೇಯ ಶತಕ ಸಿಡಿಸಿದಲ್ಲದೆ, ಮುರಿಯದ ವಿಕೆಟ್​ಗಳ 210 ರನ್​ಗಳ ದಾಖಲೆಯ ಜೊತೆಯಾಟವನ್ನು ಆಡಿದರು. ಈ ಮೂಲಕ ಅತಿದೊಡ್ಡ ಜೊತೆಯಾಟ ನಿರ್ಮಿಸಿದ ದಾಖಲೆಯನ್ನೂ ಈ ಇಬ್ಬರು ಬ್ಯಾಟ್ಸ್‌ಮನ್​ಗಳು ನಿರ್ಮಿಸಿದ್ದಾರೆ.

* ಒಂದೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಮಾಡಿತು. ಭಾರತ ಒಟ್ಟು 23 ಸಿಕ್ಸರ್‌ಗಳನ್ನು ಬಾರಿಸಿತ್ತು. ತಿಲಕ್ ವರ್ಮಾ 10, ಸಂಜು ಸ್ಯಾಮ್ಸನ್ 9 ಮತ್ತು ಅಭಿಷೇಕ್ ಶರ್ಮಾ 4 ಸಿಕ್ಸರ್ ಬಾರಿಸಿದರು.

ಭಾರತ ಈ ಪಂದ್ಯದಲ್ಲಿ ಇನ್ನೂ ನಾಲ್ಕು ಸಿಕ್ಸರ್‌ ಸಿಡಿಸಿದ್ದರೆ ವಿಶ್ವದಾಖಲೆಯಾಗುತ್ತಿತ್ತು. ಜಿಂಬಾಬ್ವೆ 27 ಸಿಕ್ಸರ್‌ ಸಿಡಿಸಿ ಅಗ್ರಸ್ಥಾನದಲ್ಲಿದ್ದರೆ, ನೇಪಾಳ 26 ಸಿಕ್ಸರ್​ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇದೀಗ ಭಾರತ ತಂಡವು 23 ಸಿಕ್ಸರ್​ ಸಿಡಿಸಿ ಮೂರನೇ ಸ್ಥಾನಕ್ಕೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.