ಸೆಂಚುರಿಯನ್: ತಿಲಕ್ ವರ್ಮಾ ಚೊಚ್ಚಲ ಶತಕದ ಬಲದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ 11 ರನ್‌ಗಳ ಅಂತರದ ಗೆಲುವು ಗಳಿಸಿದೆ.
ಆ ಮೂಲಕ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 219 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಏಳು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಆ ಮೂಲಕ 2024ನೇ ಸಾಲಿನಲ್ಲಿ ಎಂಟನೇ ಸಲ 200ಕ್ಕೂ ಹೆಚ್ಚು ರನ್ ಪೇರಿಸಿರುವ ಟೀಮ್ ಇಂಡಿಯಾ ನೂತನ ದಾಖಲೆ ನಿರ್ಮಿಸಿದೆ.
ಅಲ್ಲದೆ ಟಿ20 ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಸಲ 200ಕ್ಕೂ ಹೆಚ್ಚು ರನ್ ಗಳಿಸಿದ ತಂಡವೆಂಬ ಹೆಗ್ಗಳಿಕೆಗೆ ಭಾಜನವಾಗಿದೆ.
2023ನೇ ಸಾಲಿನಲ್ಲಿ ಟೀಮ್ ಇಂಡಿಯಾ ಏಳು ಸಲ 200ಕ್ಕೂ ಹೆಚ್ಚು ರನ್ ಗಳಿಸಿತ್ತು. ಇನ್ನು ಪ್ರಸಕ್ತ ಸಾಲಿನಲ್ಲಿ ಜಪಾನ್ ಮತ್ತು 2022ರಲ್ಲಿ ಬರ್ಮಿಂಗ್‌ಹ್ಯಾಮ್ ಬಿಯರ್ಸ್ ತಲಾ ಏಳು ಸಲ 200ಕ್ಕೂ ಹೆಚ್ಚು ರನ್ ಪೇರಿಸಿತ್ತು.
ತಿಲಕ್ ವರ್ಮಾ ಕೇವಲ 56 ಎಸೆತಗಳಲ್ಲಿ 107 ರನ್ ಗಳಿಸಿ ಅಜೇಯರಾಗುಳಿದರು. ಅವರ ಅಮೋಘ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿ ಹಾಗೂ ಏಳು ಸಿಕ್ಸರ್ ಒಳಗೊಂಡಿತ್ತು. ಅಭಿಷೇಕ್ ಶರ್ಮಾ 25 ಎಸೆತಗಳಲ್ಲಿ 50 ರನ್ ಗಳಿಸಿ (5 ಸಿಕ್ಸರ್, 3 ಬೌಂಡರಿ) ಅಬ್ಬರಿಸಿದರು.
2024ನೇ ಸಾಲಿನಲ್ಲಿ ಭಾರತದ ನಾಲ್ವರು ಬ್ಯಾಟರ್‌ಗಳು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕದ ಸಾಧನೆ ಮಾಡಿದ್ದಾರೆ. ಈ ಪೈಕಿ ಸಂಜು ಸ್ಯಾಮ್ಸನ್ ಎರಡು, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ಮತ್ತು ರೋಹಿತ್ ಶರ್ಮಾ ತಲಾ ಒಂದು ಶತಕಗಳನ್ನು ಗಳಿಸಿದ್ದಾರೆ.
ಸತತ ಎರಡು ಶತಕಗಳ ಬಳಿಕ ಸತತ ಎರಡನೇ ಬಾರಿ ಶೂನ್ಯಕ್ಕೆ ಔಟ್
ಟಿ20 ಕ್ರಿಕೆಟ್‌ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿರುವ ಸಂಜು ಸ್ಯಾಮ್ಸನ್ ಬಳಿಕ ಸತತ ಎರಡು ಸಲ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.
30 ವರ್ಷದ ಸಂಜು, ಒಟ್ಟಾರೆಯಾಗಿ ಪ್ರಸಕ್ತ ಸಾಲಿನಲ್ಲಿ ಐದನೇ ಸಲ ಶೂನ್ಯಕ್ಕೆ ಔಟ್ ಆಗಿದ್ದಾರೆ. ಆ ಮೂಲಕ ಒಂದೇ ವರ್ಷದಲ್ಲಿ ಎರಡು ಶತಕ ಹಾಗೂ ಐದು ಬಾರಿ ಸೊನ್ನೆಗೆ ಔಟ್ ಆಗಿರುವ ಬ್ಯಾಟರ್ ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.