ಬೆಂಗಳೂರು: ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ ಅರ್ಧಶತಕ ಗಳಿಸಿದ ಭಾರತದ ಬ್ಯಾಟರ್ ಎಂಬ ಕೀರ್ತಿಗೆ ಎಡಗೈ ವಿಕೆಟ್ ಕೀಪರ್ ರಿಷಭ್ಪಂತ್ ಪಾತ್ರರಾಗಿದ್ದಾರೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಪಂತ್ ಈ ಸ್ಮರಣೀಯ ದಾಖಲೆಗೆ ಭಾಜನರಾಗಿದ್ದಾರೆ.
ಈ ಮೂಲಕ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರ ಸುಮಾರು 40 ವರ್ಷ ಹಳೆಯದಾದ ದಾಖಲೆಯನ್ನು ಮುರಿದಿದ್ದಾರೆ.
ಲಂಕಾ ಬೌಲರ್‌ಗಳನ್ನು ದಂಡಿಸಿದ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ಹಿಂದೆ 1982ರಲ್ಲಿ ಪಾಕಿಸ್ತಾನ ವಿರುದ್ಧ ಕರಾಚಿ ಟೆಸ್ಟ್‌ಪಂದ್ಯದಲ್ಲಿ ಕಪಿಲ್ ದೇವ್ 30 ಎಸೆತಗಳಲ್ಲಿ ಫಿಫ್ಟಿ ಸಾಧನೆಗೈದಿದ್ದರು.
ಇನ್ನು ಕಳೆದ ವರ್ಷ ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶಾರ್ದೂಲ್ ಠಾಕೂರ್ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, 2008ರ ಚೆನ್ನೈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 32 ಎಸೆತಗಳಲ್ಲಿ ಫಿಫ್ಟಿ ಗಳಿಸಿದ್ದರು.
ಭಾರತ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ ಅತಿ ವೇಗದ ಅರ್ಧಶತಕಗಳ ಪಟ್ಟಿಯಲ್ಲಿ ಪಂತ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ 2005ರ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧವೇ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇನ್ನು 1981ರಲ್ಲಿ ಇಯಾನ್ ಬಾಥಮ್ 28 ಎಸೆತಗಳಲ್ಲಿ ಅರ್ಧಶತಕ ಸಾಧನೆಗೈದಿದ್ದರು. ಇದನ್ನೀಗ ಪಂತ್ ಸರಿಗಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.