ಬೆಂಗಳೂರು: ಉದ್ಯಾನನಗರಿಯಲ್ಲಿ ಇದೇ ಮೊದಲ ಸಲ ಆಯೋಜಿಸಲಾಗಿದ್ದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 57 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು.
ಕೋವಿಡ್ ಕಾರಣದಿಂದಾಗಿ ಕಳೆದ ಎರಡೂವರೆ ವರ್ಷ ಬೆಂಗಳೂರಿನಲ್ಲಿ ಯಾವುದೇ ಅಂತರರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳು ನಡೆದಿಲ್ಲ. ಅಲ್ಲದೇ ಹಗಲು ರಾತ್ರಿ ಟೆಸ್ಟ್ ಪಂದ್ಯವು ಇದೇ ಮೊದಲ ಸಲ ನಡೆದಿದ್ದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಕ್ಕೆ ಧಾವಿಸಿದರು. ಮೊದಲ ದಿನವಾದ ಶನಿವಾರ 20500, ಭಾನುವಾರ 23842 ಮತ್ತು ಮೂರನೇ ದಿನವಾದ ಸೋಮವಾರ 13100 ಜನರು ವೀಕ್ಷಿಸಿದರು.
‘ಟೆಸ್ಟ್ ಪಂದ್ಯವೊಂದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದು ವೀಕ್ಷಿಸಿರುವುದು ಸಂತಸದ ಸಂಗತಿ. ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯದ ಶೇ 50ರಷ್ಟು ಜನರ ಪ್ರವೇಶಕ್ಕೆ ಮಾತ್ರ ಮೊದಲು ಅವಕಾಶ ನೀಡಲಾಗಿತ್ತು. ಆದರೆ, ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾದ ಕಾರಣದಿಂದ ರಾಜ್ಯ ಸರ್ಕಾರ ಹಾಗೂ ಬಿಸಿಸಿಐ ಶೇ 100ರಷ್ಟು ಆಸನ ಭರ್ತಿಗೆ ಪಂದ್ಯದ ಮುನ್ನಾದಿನ ಅನುಮತಿ ನೀಡಿದ್ದವು’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದರು.
ಟಿಕೆಟ್ ಹಣ ಮರುಪಾವತಿ
ಟೆಸ್ಟ್ ಪಂದ್ಯವು ಮೂರು ದಿನಗಳಲ್ಲಿ ಮುಕ್ತಾಯವಾದ ಕಾರಣ, ಉಳಿದ ಎರಡು ದಿನಗಳ ಟಿಕೆಟ್ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಕೆಎಸ್‌ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ನಾಲ್ಕು ಮತ್ತು ಐದನೇ ದಿನದ ಟಿಕೆಟ್‌ಗಳನ್ನು ಖರೀದಿಸಿರುವವರು ಮರಳಿ ಹಣ ಪಡೆಯಬಹುದಾಗಿದೆ. ₹ 100 ಟಿಕೆಟ್‌ಗೆ ಗೇಟ್ ಸಂಖ್ಯೆ 2ರಲ್ಲಿ, ₹ 500ರ ಟಿಕೆಟ್‌ಗಳಿಗೆ ಗೇಟ್ ಸಂಖ್ಯೆ 19ರಲ್ಲಿ ಹಾಗೂ ₹ 750ಕ್ಕಿಂತ ಹೆಚ್ಚು ಬೆಲೆಯ ಟಿಕೆಟ್‌ಗಳಿಗೆ ಗೇಟ್ ಸಂಖ್ಯೆ 18ರ ಕೌಂಟರ್‌ಗಳಲ್ಲಿ ಮರಳಿ ನೀಡಲಾಗುವುದು. ಮಾರ್ಚ್ 19 ಮತ್ತು 20ರಂದು ಬೆಳಿಗ್ಗೆ 10.30ರಿಂದ ರಾತ್ರಿ 7.30ರವರೆಗೆ ಟಿಕೆಟ್ ಮರಳಿಸಿ ಹಣ ಪಡೆಯಬೇಕು.
ಸಿ ಲೋವರ್ ಸೀಸನ್ ಟಿಕೆಟ್‌ಗಳಿಗೆ ಮಾತ್ರ ಹಣ ಮರುಪಾವತಿ ಮಾಡಲಾಗುವುದಿಲ್ಲ ಎಂದೂ ತಿಳಿಸಲಾಗಿದೆ.
ಸ್ಟೇನ್ ದಾಖಲೆ ಮೀರಿದ ಅಶ್ವಿನ್
ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮತ್ತೊಂದು ದಾಖಲೆಯನ್ನು ಮುರಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮತ್ತೊಂದು ಮೆಟ್ಟಿಲು ಮೇಲೆರಿದರು. ಅವರು ದಕ್ಷಿಣ ಆಫ್ರಿಕಾದ ಡೆಲ್ ಸ್ಟೇನ್ ಅವರ ವಿಕೆಟ್ ಗಳಿಕೆ ದಾಖಲೆಯನ್ನು ಮುರಿದರು.
ಸ್ಟೇನ್ 439 ವಿಕೆಟ್‌ಗಳನ್ನು ಗಳಿಸಿದ್ದಾರೆ. ಇದೀಗ ಅಶ್ವಿನ್ 440 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ಧಾರೆ. ಈಚೆಗೆ ಮೊಹಾಲಿ ಪಂದ್ಯದಲ್ಲಿ ವಿಕೆಟ್ ಗಳಿಸಿ,ಕಪಿಲ್ ದೇವ್ (434) ದಾಖಲೆಯನ್ನು ಮುರಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.