ADVERTISEMENT

ಅಭ್ಯಾಸದ ವೇಳೆ ಗಂಭೀರ್‌–ಕೊಹ್ಲಿ ಮಾತುಕತೆ: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2024, 5:59 IST
Last Updated 2 ಆಗಸ್ಟ್ 2024, 5:59 IST
<div class="paragraphs"><p>ಭಾರತ ಕ್ರಿಕೆಟ್ ತಂಡದ  ಮಾಜಿ ನಾಯಕ ವಿರಾಟ್‌ ಕೊಹ್ಲಿ&nbsp;ಹಾಗೂ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌</p></div>

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌

   

ಪಿಟಿಐ ಚಿತ್ರ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಭ್ಯಾಸದ ವೇಳೆ ಸುದೀರ್ಘ ಮಾತುಕತೆಯಲ್ಲಿ ತೊಡಗಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕ್ರಿಕೆಟ್‌ ಪ್ರಿಯರು ಭಾರಿ ಚರ್ಚೆ ನಡೆಸುತ್ತಿದ್ದಾರೆ.

ADVERTISEMENT

ದಶಕದ ಹಿಂದೆ ಭಾರತ ತಂಡದ ಪರ ಹಲವು ಪಂದ್ಯಗಳಲ್ಲಿ ಒಂದಾಗಿ ಕಣಕ್ಕಿಳಿದಿದ್ದ ಗಂಭೀರ್‌ ಹಾಗೂ ಕೊಹ್ಲಿ, ಐಪಿಎಲ್‌ ಟೂರ್ನಿಗಳ ಸಂದರ್ಭದಲ್ಲಿ ಪರಸ್ಪರ ಕಿತ್ತಾಡಿಕೊಂಡು ಸಾಕಷ್ಟು ಸಲ ಸುದ್ದಿಯಾಗಿದ್ದರು.

2023ರಲ್ಲಿ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ಮೆಂಟರ್‌ ಆಗಿದ್ದ ಗಂಭೀರ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಟಗಾರ ಕೊಹ್ಲಿ, ಕ್ರೀಡಾಂಗಣದಲ್ಲೇ ಮಾತಿನ ಚಕಮಕಿ ನಡೆಸಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಆ ಪಂದ್ಯದ ಬಳಿಕ ಇಬ್ಬರಿಗೂ ದಂಡ ಹಾಕಲಾಗಿತ್ತು. ಆದರೆ, 2024ರಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಮೆಂಟರ್‌ ಆಗಿದ್ದ ಗಂಭೀರ್‌, ಪಂದ್ಯದ ವಿರಾಮದ ಅವಧಿಯಲ್ಲಿ ಕೊಹ್ಲಿಯನ್ನು ಬಹಳ ಆಪ್ತವಾಗಿ ಮಾತನಾಡಿಸಿದ್ದರು. ಈ ಬೆಳವಣಿಗೆಗೆ ಕ್ರೀಡಾಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಇವರಿಬ್ಬರು ಮತ್ತೆ ಭಾರತದ ತಂಡದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಗಂಭೀರ್‌, ಟೀಂ ಇಂಡಿಯಾದ ಮುಖ್ಯ ಕೋಚ್‌ ಆದ ನಂತರ ಮೊದಲ ಸವಾಲು ಎದುರಿಸುತ್ತಿದ್ದಾರೆ. ಲಂಕಾ ವಿರುದ್ಧ ತಲಾ ಮೂರು ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿ ನಡೆಯುತ್ತಿದೆ. ಟಿ20 ಸರಣಿ ಈಗಾಗಲೇ ಮುಕ್ತಾಯವಾಗಿದೆ. ಸೂರ್ಯಕುಮಾರ್‌ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ 'ಬ್ಲೂ ಬಾಯ್ಸ್‌' ಸರಣಿಯನ್ನು 3–0 ಅಂತರದಲ್ಲಿ ಕ್ಲೀನ್‌ ಸ್ವೀಪ್ ಮಾಡಿದ್ದಾರೆ.

ಇಂದಿನಿಂದ ಏಕದಿನ ಸರಣಿ ಆರಂಭವಾಗಲಿದ್ದು, ರೋಹಿತ್‌ ಶರ್ಮಾ ನಾಯಕತ್ವ ವಹಿಸಲಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್‌ ಗೆದ್ದ ಬಳಿಕ ರೋಹಿತ್‌ ಮತ್ತು ವಿರಾಟ್‌ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಇಬ್ಬರೂ ಲಂಕಾ ಎದುರಿನ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಆಯ್ಕೆಗೆ ಲಭ್ಯರಿದ್ದಾರೆ ಎಂದು ಗಂಭೀರ್ ಪ್ರಕಟಿಸಿದ್ದರು.

ಗಂಭೀರ್‌–ಕೊಹ್ಲಿ ಮಾತುಕತೆ
ಏಕದಿನ ಸರಣಿಗೂ ಮುನ್ನ ಭಾರತ ತಂಡ ಕೊಲೊಂಬೊದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಂಭೀರ್ ಹಾಗೂ ಕೊಹ್ಲಿ, ಪರಸ್ಪರ ನಗುತ್ತಾ ಮಾತುಕತೆ ನಡೆಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಕೊಹ್ಲಿಗೆ ಗಂಭೀರ್‌ ನೆರವಾಗಿದ್ದರು ಎಂಬಲ್ಲಿಂದ, ಭಾರತ ಕ್ರಿಕೆಟ್‌ನಲ್ಲಿ 'ನವ ಯುಗ' ಆರಂಭವಾಗಿದೆ ಎಂಬಲ್ಲಿಯವರೆಗೆ ಭಾರಿ ಚರ್ಚೆ ನಡೆಯುತ್ತಿದೆ. ಇವರಿಬ್ಬರೂ ಜೊತೆಗಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿರುವ ಅಭಿಮಾನಿಗಳು, 'ದೆಹಲಿ ಹುಡುಗರು ಮತ್ತೆ ಒಂದಾಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಐಸಿಸಿ ಹಾಗೂ ಐಪಿಎಲ್‌ ಪ್ರಾಂಚೈಸಿಗಳೂ ಕೊಹ್ಲಿ, ಗಂಭೀರ್‌ ಸಂಭಾಷಣೆಯ ಚಿತ್ರಗಳನ್ನು ಹಂಚಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.