ಪಲೆಕೆಲೆ: ಬೌಲರ್‌ಗಳ ಛಲದ ಆಟದಿಂದಾಗಿ ಭಾರತ ತಂಡವು ಶ್ರೀಲಂಕಾ ಎದುರಿನ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು 3–0ಯಿಂದ ತನ್ನದಾಗಿಸಿಕೊಂಡಿತು.
ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮತ್ತು ಪೂರ್ಣಾವಧಿ ನಾಯಕ ರಾಗಿ ಸೂರ್ಯಕುಮಾರ್ ಯಾದವ್ ಅವರು ಆಡಿದ ಮೊದಲ ಸರಣಿ ಇದಾಗಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಹೀಷ ತೀಕ್ಷಣ (28ಕ್ಕೆ3) ಅವರ ಬೌಲಿಂಗ್ ಬಲದಿಂದ ಶ್ರೀಲಂಕಾ ತಂಡವು ಭಾರತ ತಂಡವನ್ನು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 137 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಗುರಿ ಬೆನ್ನಟ್ಟಿದ ಲಂಕಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು ಈ ಮೊತ್ತ ಮುಟ್ಟಿತು. ಭಾರತ ತಂಡದ ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ರಿಂಕು ಸಿಂಗ್ ಮತ್ತು ಸೂರ್ಯಕುಮಾರ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಅಲ್ಲದೇ ಉತ್ತಮ ಫೀಲ್ಡಿಂಗ್ ಮೂಲಕ ರನ್‌ಗಳಿಗೆ ತಡೆಯೊಡ್ಡಿದರು. ಇದರಿಂದಾಗಿ ಸಮಬಲವಾಯಿತು. ಹಿಂದಿನ ಎರಡೂ ಪಂದ್ಯದಂತೆ ಈ ಪಂದ್ಯದಲ್ಲೂ ಲಂಕಾ ಉತ್ತಮ ಆರಂಭ ಪಡೆದು, ನಂತರ ಕುಸಿಯಿತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡವು 2 ರನ್ ಗಳಿಸಿತು. ಇದಕ್ಕುತ್ತರವಾಗಿ ಸೂರ್ಯ ಒಂದು ಬೌಂಡರಿ ಹೊಡೆದು ಜಯಭೇರಿ ಬಾರಿಸಿದರು.
ಗಿಲ್–ಪರಾಗ್ ಜೊತೆಯಾಟ: ಶುಭಮನ್ ಗಿಲ್ (39; 37ಎ, 4X3), ರಿಯಾನ್ ಪರಾಗ್ (26; 18ಎ) ಮತ್ತು ವಾಷಿಂಗ್ಟನ್ ಸುಂದರ್ (25; 18ಎ) ಅವರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಸ್ಪಿನ್ನರ್ ತೀಕ್ಷಣ ಹಾಗೂ ವನಿಂದು ಹಸರಂಗಾ ಅವರ ದಾಳಿಯಿಂದಾಗಿ ಭಾರತ 48 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಇದರಿಂದಾಗಿ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಆತಂಕ ಎದುರಿಸಿತ್ತು. ಈ ಹಂತದಲ್ಲಿ ಗಿಲ್ ಮತ್ತು ರಿಯಾನ್ ಪರಾಗ್ ಆರನೇ ವಿಕೆಟ್‌ಗೆ 54 ರನ್ ಸೇರಿಸಿದರು. ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 137 (ಶುಭಮನ್ ಗಿಲ್ 39, ರಿಯಾನ್ ಪರಾಗ್ 26, ವಾಷಿಂಗ್ಟನ್ ಸುಂದರ್ 25, ಮಹೀಷ ತೀಕ್ಷಣ 28ಕ್ಕೆ3, ವನಿಂದು ಹಸರಂಗಾ 29ಕ್ಕೆ2). ಶ್ರೀಲಂಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 137 (ಕುಶಾಲ್ ಪೆರೆರಾ 46, ಕುಶಾಲ್ ಮೆಂಡೀಸ್ 43; ವಾಷಿಂಗ್ಟನ್ 23ಕ್ಕೆ 2, ರಿಂಕು ಸಿಂಗ್ 3ಕ್ಕೆ 2, ಸೂರ್ಯಕುಮಾರ್ 5ಕ್ಕೆ 2). ಪಂದ್ಯದ ಆಟಗಾರ: ವಾಷಿಂಗ್ಟನ್ ಸುಂದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.