ಬಾರ್ಬೆಡೋಸ್: ‘ನಿಶ್ಶಕ್ತಗೊಂಡಿರುವ’ ವೆಸ್ಟ್ ಇಂಡೀಸ್ ವಿರುದ್ಧ ಶನಿವಾರ ನಡೆಯುವ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ನೀಡುವ ಗುರಿ ಹೊಂದಿರುವ ಭಾರತ, ‘ಮೂಲ ಬ್ಯಾಟಿಂಗ್ ಸರದಿ’ಗೆ ಮರಳುವ ನಿರೀಕ್ಷೆಯಿದೆ. ಜೊತೆಗೆ ಈ ಪಂದ್ಯ ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ ಗೆಲುವಿನ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಆಟಗಾರರನ್ನು ಮುನ್ನೆಲೆಗೆ ತಂದು ಮಾಡಿದ ಪ್ರಯೋಗ, ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಉಂಟುಮಾಡಿತ್ತು. ಆದರೆ 115 ರನ್‌ಗಳ ಸಣ್ಣ ಗುರಿ ಎದುರಾಗಿದ್ದ ಕಾರಣ ಅಪಾಯ ಎದುರಾಗಿರಲಿಲ್ಲ.
ಎರಡನೇ ಪಂದ್ಯದಲ್ಲಿ ಮತ್ತೊಮ್ಮೆ ಸಣ್ಣ ಗುರಿ ಎದುರಾದರೂ, ಪ್ರವಾಸಿ ತಂಡ ಪ್ರಯೋಗಕ್ಕೆ ಹೋಗುವ ಸಾಧ್ಯತೆ ಕಡಿಮೆ. ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸಬಹುದು. ಕೊಹ್ಲಿ ಮೂರನೇ ಕ್ರಮಾಂಕದಲ್ಲೇ ಆಡಲು ಇಳಿಯಬಹುದು.
ವಿಶ್ವಕಪ್‌ಗೆ ಮೊದಲು ಭಾರತಕ್ಕೆ 11 ಏಕದಿನ ಪಂದ್ಯಗಳನ್ನು ಆಡಲು ಇದ್ದು, ಸ್ಥಿರ ಬ್ಯಾಟಿಂಗ್ ಕ್ರಮಾಂಕಕ್ಕೇ ಒತ್ತು ನೀಡುವ ಸಾಧ್ಯತೆ ಕಾಣುತ್ತಿದೆ.
ಬಾರ್ಬೆಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನ, ವೆಸ್ಟ್ ಇಂಡೀಸ್‌ನ ಪ್ರಸಿದ್ಧ ವೇಗಿಗಳಾದ ಜೋಲ್ ಗಾರ್ನರ್, ಮಾಲ್ಕಂ ಮಾರ್ಷಲ್ ಅವರ ತವರು. ಅವರು ವೇಗದಿಂದ ಎಂಥವರನ್ನೂ ನಡುಗಿಸಬಲ್ಲ ಬೌಲರ್‌ಗಳಾಗಿದ್ದರು. ಆದರೆ ತದ್ವಿರುದ್ಧ ಎಂಬಂತೆ, ಗುರುವಾರ ಇದೇ ಮೈದಾನದಲ್ಲಿ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಉತ್ತಮ ಬೌನ್ಸ್, ತಿರುವು ಪಡೆದು ಆತಿಥೇಯ ಬ್ಯಾಟರ್‌ಗಳನ್ನು ಕಾಡಿದರು.
ಭಾರತದ ಬ್ಯಾಟರ್‌ಗಳ ಪೈಕಿ ಸೂರ್ಯಕುಮಾರ್ ಯಾದವ್ ಮೇಲೆ ಒತ್ತಡವಿದೆ. ಟಿ–20ಯಲ್ಲಿ ಇರುವ ಲಯವನ್ನು ಅವರು ಏಕದಿನ ಪಂದ್ಯಗಳಲ್ಲಿ ಪ್ರದರ್ಶಿಸಿಲ್ಲ. ಮೊದಲ ಪಂದ್ಯದಲ್ಲಿ ಕುದುರಿಕೊಳ್ಳುವಂತೆ ಕಾಣುವಾಗಲೇ ಗುಡಕೇಶ್ ಮೋತಿ ಬೌಲಿಂಗ್‌ನಲ್ಲಿ ಸ್ವೀಪ್‌ಗೆ ಹೋಗಿ ಮತ್ತೊಮ್ಮೆ ಅಲ್ಪಮೊತ್ತಕ್ಕೆ ಮರಳಿದ್ದರು.
ಶ್ರೇಯಸ್ ಅಯ್ಯರ್ ‘ಫಿಟ್’ ಆದಲ್ಲಿ, ಜೊತೆಗೆ ಕೆ.ಎಲ್‌ರಾಹುಲ್ ತಂಡಕ್ಕೆ ಮರಳಿದಲ್ಲಿ ಸೂರ್ಯ ಅವರ ಸ್ಥಾನ ಅಲುಗಾಡಬಹುದು. ಹೀಗಾಗಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕಾಗಿದೆ.
ಮೊಹಮ್ಮದ್ ಶಮಿ, ಬುಮ್ರಾ, ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ನಂತೆ ಮುಕೇಶ್ ಕುಮಾರ್ ಅವರಿಗೆ (ಮೀಸಲು) ಐದನೇ ಬೌಲರ್ ಆಗಿ ತಂಡದಲ್ಲಿ ಉಳಿಯುವ ಅವಕಾಶವಿದೆ. ಅವರು ಟೆಸ್ಟ್ ಮತ್ತು ಏಕದಿನ ಪಂದ್ಯದ ಬೌಲಿಂಗ್‌ನಲ್ಲಿ ಶಿಸ್ತು ಪ್ರದರ್ಶಿಸಿದ್ದಾರೆ.
ತಂಡಗಳು
ವೆಸ್ಟ್ ಇಂಡೀಸ್: ಶಾಯಿ ಹೋಪ್ (ನಾಯಕ), ರೋವ್ಮನ್ ಪಾವೆಲ್ (ಉ.ನಾ), ಅಲಿಕ್ ಅಥನೇಝ್, ಯಾನಿಕ್ ಕರೈ, ಕೇಸಿ ಕಾರ್ಟಿ, ಡೊಮಿನಿಕ್ ಡ್ರೇಕ್ಸ್, ಶಿಮ್ರೊನ್ ಹೆಟ್ಮೆಯರ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್, ರೊಮಾರಿಯೊ ಶೆಫರ್ಡ್, ಕೆವಿನ್ ಸಿಂಕ್ಲೇರ್, ಓಷೇನ್ ಥಾಮಸ್.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ ಉನದ್ಕತ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.
ಪಂದ್ಯ ಆರಂಭ: ರಾತ್ರಿ 7.
ನೇರ ಪ್ರಸಾರ: ಡಿ.ಡಿ. ಸ್ಪೋರ್ಟ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.