ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್): ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 438 ರನ್ ಗಳಿಸಿದೆ.
ರವೀಂದ್ರ ಜಡೇಜ 61 ಹಾಗೂ ರವಿಚಂದ್ರನ್ ಅಶ್ವಿನ್ 56 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ವಿಂಡೀಸ್ ಎರಡನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ.
ವಿರಾಟ್ ಕೊಹ್ಲಿ ತಮ್ಮ 500ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ 121 ರನ್ ಗಳಿಸಿ ಮೆರುಗು ತುಂಬಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಹಾಗೂ ಒಟ್ಟಾರೆ 76ನೇ ಶತಕ ಸಾಧನೆ ಮಾಡಿದರು.
ವಿದೇಶಿ ಅಂಗಳದಲ್ಲಿ ವಿರಾಟ್ 2018ರ ನಂತರ ಗಳಿಸಿದ ಮೊದಲ ಶತಕ ಇದಾಗಿದೆ. ಭಾರತ ಮತ್ತು ವಿಂಡೀಸ್ ತಂಡಗಳ ನಡುವಣ 100ನೇ ಟೆಸ್ಟ್ ಕೂಡ ಇದಾಗಿದೆ.
ರನೌಟ್ ಆದ ವಿರಾಟ್ 206 ಎಸೆತಗಳಲ್ಲಿ 121 ರನ್ (11 ಬೌಂಡರಿ) ಗಳಿಸಿದರು. ಅಲ್ಲದೆ ಐದನೇ ವಿಕೆಟ್‌ಗೆ ಜಡೇಜ ಅವರೊಂದಿಗೆ 159 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಜಡೇಜ 152 ಎಸೆತಗಳಲ್ಲಿ 61 ರನ್ (5 ಬೌಂಡರಿ) ಗಳಿಸಿದರು.
ಕೆಳ ಕ್ರಮಾಂಕದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ಅಶ್ವಿನ್ (56 ರನ್, 78 ಎಸೆತ, 8 ಬೌಂಡರಿ) ಗಮನ ಸೆಳೆದರು. ಇನ್ನುಳಿದಂತೆ ಇಶಾನ್ ಕಿಶನ್ 25 ರನ್ ಗಳಿಸಿದರು. ವಿಂಡೀಸ್ ಪರ ಕೆಮರ್ ರೋಚ್ ಹಾಗೂ ಜೋಮೆಲ್ ವಾರಿಕನ್ ತಲಾ ಮೂರು ವಿಕೆಟ್ ಗಳಿಸಿದರು.
ವಿಂಡೀಸ್‌ಗೆ ತೇಜನಾರಾಯಣ ಚಂದ್ರಪಾಲ್ (33) ವಿಕೆಟ್ ನಷ್ಟವಾಗಿದೆ. ಈ ವಿಕೆಟ್ ಜಡೇಜ ಪಾಲಾಯಿತು. ನಾಯಕ ಕ್ರೇಗ್ ಬ್ರಾತ್‌ವೇಟ್ 37* ಹಾಗೂ ಕಿರ್ಕ್ ಮೆಕೆಂಝಿ 14* ಕ್ರೀಸಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.