ಪೋರ್ಟ್ ಆಫ್ ಸ್ಪೇನ್ (ಟ್ರಿನಿಡಾಡ್): ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಶತಕ ಗಳಿಸಿರುವ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ದಾಖಲೆ ಸರಿಗಟ್ಟಿದ್ದಾರೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಸ್ಮರಣೀಯ ಸಾಧನೆ ಮಾಡಿದರು.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 29ನೇ ಶತಕ ಗಳಿಸಿದರು. ಒಟ್ಟಾರೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 76ನೇ ಶತಕ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಟೆಸ್ಟ್‌ನಲ್ಲಿ 51 ಹಾಗೂ ಒಟ್ಟಾರೆ 100 ಶತಕಗಳನ್ನು ಗಳಿಸಿದ್ದರು.
ಇದನ್ನೂ ಓದಿ: IND vs WI: ಕೊಹ್ಲಿ ಶತಕ, ಜಡೇಜ-ಅಶ್ವಿನ್ ಫಿಫ್ಟಿ; ಭಾರತ 438; ವಿಂಡೀಸ್ ದಿಟ್ಟ ಉತ್ತರ
ತಮ್ಮ 500ನೇ ಅಂತರರಾಷ್ಟ್ರೀಯ ಕ್ರಿಕೆಟ್ ವಿರಾಟ್ ಕೊಹ್ಲಿ ಶತಕ ಗಳಿಸಿ ಸಂಭ್ರಮಿಸಿದರು.
500 ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ. ಕೊಹ್ಲಿ ಪಾಲಿಗಿದು 76ನೇ ಶತಕವಾಗಿದೆ. ಅಷ್ಟೇ ಪಂದ್ಯಗಳಲ್ಲಿ ಸಚಿನ್ 75 ಶತಕ ಗಳಿಸಿದ್ದರು.
ಟೆಸ್ಟ್‌ನಲ್ಲಿ ಅಪರೂಪವೆಂಬಂತೆ ರನೌಟ್ ಆದ ಕೊಹ್ಲಿ 206 ಎಸೆತಗಳಲ್ಲಿ 121 ರನ್ (11 ಬೌಂಡರಿ) ಗಳಿಸಿದರು.
ಐದು ವರ್ಷಗಳ ಬಳಿಕ ವಿದೇಶಿ ಅಂಗಳದಲ್ಲಿ ವಿರಾಟ್ ಕೊಹ್ಲಿ ಶತಕ ಸಾಧನೆ ಮಾಡಿದರು. ಅಂದರೆ 2018ರ ನಂತರ ಗಳಿಸಿದ ಮೊದಲ ಶತಕ ಇದಾಗಿದೆ.
100ನೇ ಪಂದ್ಯ..
ಭಾರತ ಮತ್ತು ವಿಂಡೀಸ್ ತಂಡಗಳ ನಡುವಣ 100ನೇ ಟೆಸ್ಟ್ ಕೂಡ ಇದಾಗಿದೆ.
ಸ್ಮಿತ್, ರೂಟ್‌ಗೆ ಕೊಹ್ಲಿ ಪೈಪೋಟಿ...
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯ ಆಟಗಾರರ ಪೈಕಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಸ್ಟೀವ್ ಸ್ಮಿತ್: 32
ಜೋ ರೂಟ್: 30
ವಿರಾಟ್ ಕೊಹ್ಲಿ: 29
ಕೇನ್ ವಿಲಿಯಮ್ಸನ್: 28
ಡೇವಿಡ್ ವಾರ್ನರ್: 25
ವಿದೇಶದಲ್ಲಿ 15 ಶತಕಗಳನ್ನು ಗಳಿಸಿದ್ದೇನೆ: ಕೊಹ್ಲಿ ಉತ್ತರ
ಈ ಶತಕ ನನ್ನ ಪಾಲಿಗೆ ಮಹತ್ವದಾಗಿದ್ದು, ನನ್ನ ಬ್ಯಾಟಿಂಗ್ ಅನ್ನು ಆನಂದಿಸಿದ್ದೇನೆ. ಯಾವಾಗಲೂ ನನ್ನ ತಂಡಕ್ಕಾಗಿ ಒತ್ತಡವನ್ನು ಅವಕಾಶವಾಗಿ ಪರಿವರ್ತಿಸಲು ಬಯಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐದು ವರ್ಷಗಳ ಬಳಿಕ ವಿದೇಶದಲ್ಲಿ ಶತಕ ಗಳಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ವಿದೇಶದಲ್ಲಿ ನಾನು 15 ಶತಕಗಳನ್ನು ಗಳಿಸಿದ್ದೇನೆ. ಅದು ಕೆಟ್ಟ ಸಾಧನೆಯಲ್ಲ. ತವರಿಗಿಂತಲೂ ವಿದೇಶದಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ್ದೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿಯಾಗಿದೆ ಎಂದು ಹೇಳಿದ್ದಾರೆ.
ಕಳೆದ 15 ವರ್ಷಗಳ ಅಂಕಿಅಂಶ ನನ್ನ ಪಾಲಿಗೆ ಹೆಚ್ಚು ಮಹತ್ವ ಗಿಟ್ಟಿಸಿಕೊಳ್ಳುವುದಿಲ್ಲ. ಆ ನಿರ್ದಿಷ್ಟ ಪಂದ್ಯದಲ್ಲಿ ಪ್ರಭಾವ ಬೀರಲು ಸಾಧ್ಯವಾಗಿದೆಯೇ, ತಂಡಕ್ಕಾಗಿ ಕೊಡುಗೆ ನೀಡಲು ಸಾಧ್ಯವಾಗಿದೆಯೇ ಎಂಬುದಷ್ಟೇ ಮುಖ್ಯವೆನಿಸುತ್ತದೆ ಎಂದು ಹೇಳಿದರು.
ಭಾರತಕ್ಕೆ 500 ಪಂದ್ಯಗಳನ್ನು ಆಡಲು ಸಾಧ್ಯವಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ. ನಾನೆಂದೂ ಊಹಿಸಿರಲಿಲ್ಲ. ಇದಕ್ಕಾಗಿ ಕಠಿಣ ಶ್ರಮ ವಹಿಸಿದ್ದೇನೆ. ಕ್ರೀಡೆಗೆ ನೀಡಿದ ಬದ್ಧತೆಯಿಂದಾಗಿ ಫಲಿತಾಂಶ ದೊರಕಿದೆ. ಫಿಟ್ನೆಸ್ ಮೇಲೂ ಗಮನಹರಿಸಿದ್ದೇನೆ. ಇದರಿಂದಾಗಿ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಭಾರತ-ವಿಂಡೀಸ್ 100ನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ ಕೊಹ್ಲಿ, ಇದು ನನ್ನ ಪಾಲಿಗೆ ವಿಶೇಷ. ಇಲ್ಲಿನ ಮೈದಾನದಲ್ಲಿ ಆಡುವುದನ್ನು ಇಷ್ಟಪಡುತ್ತೇನೆ. ಇದು ನನ್ನ ನೆಚ್ಚಿನ ಅಂಗಳದಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.