ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ತಂಡಗಳಿಗೆ ಗುರುವಾರ ಐತಿಹಾಸಿಕ ದಿನವಾಗಲಿದೆ.
ಉಭಯ ತಂಡಗಳು 100ನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಜಯಿಸಿ ಸರಣಿ ಕಿರೀಟ ಧರಿಸುವ ಆತ್ಮವಿಶ್ವಾಸದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವಿದೆ. ಮೊದಲ ಟೆಸ್ಟ್ ಸೋಲಿನ ಮುಯ್ಯಿ ತೀರಿಸಿಕೊಂಡು ಸಮಬಲ ಸಾಧಿಸುವ ಛಲದಲ್ಲಿ ಕ್ರೇಗ್ ಬ್ರಾಥ್ ವೇಟ್ ಇದೆ.
ಕಳೆದ 21 ವರ್ಷಗಳಿಂದ ವಿಂಡೀಸ್ ತಂಡವು ಭಾರತದ ಎದುರು ಒಂದೂ ಟೆಸ್ಟ್ ಪಂದ್ಯ ಜಯಿಸಿಲ್ಲ. ಈ ಸೋಲಿನ ಸರಪಳಿಯನ್ನು ತುಂಡರಿಸಿ ಇತಿಹಾಸ ಬರೆಯುವ ಅವಕಾಶ ಆತಿಥೇಯರಿಗೆ ಇದೆ.
ಆದರೆ, ಮೊದಲ ಪಂದ್ಯದಲ್ಲಿ ಮಿಂಚಿದ್ದ ಆಫ್‌ಸ್ಪಿನ್ನರ್ ಆರ್. ಅಶ್ವಿನ್, ವೇಗಿ ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕತ್ ಮತ್ತು ಶಾರ್ದೂಲ್ ಠಾಕೂರ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೆ, ವಿಂಡೀಸ್ ತಂಡದಲ್ಲಿ ಕ್ರೇಗ್ ಬಿಟ್ಟರೆ ಅನುಭವಿ ಬ್ಯಾಟರ್‌ಗಳ ಕೊರತೆ ಇದೆ. ಹೊಸ ಹುಡುಗ ಅಲಿಕ್ ಅಥಾಂಜೆ, ತೇಜನಾರಾಯಣ ಚಂದ್ರಪಾಲ್ ಮತ್ತು ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರ ಅವರು ತಂಡಕ್ಕೆ ಬಲ ತುಂಬಬಲ್ಲ ಬ್ಯಾಟರ್‌ಗಳಾಗಿದ್ದಾರೆ.
ಆದರೆ, ಭಾರತದ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿಹಾಕಲು ಬೌಲಿಂಗ್ ಪಡೆ ಸಮರ್ಥವಾಗಿಲ್ಲ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಅವರ ಜೊತೆಯಾಟಕ್ಕೆ ತಡೆಯೊಡ್ಡುವಲ್ಲಿ ಬೌಲರ್‌ಗಳು ವಿಫಲರಾಗಿದ್ದರು. ಅಲ್ಲದೇ ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶುಭಮನ್ ಗಿಲ್, ರವೀಂದ್ರ ಜಡೇಜ ಮತ್ತು ಅಶ್ವಿನ್ ಅವರನ್ನೂ ಕಟ್ಟಿಹಾಕುವ ಸವಾಲು ಬೌಲರ್‌ಗಳಿಗೆ ಇದೆ. ಆದ್ದರಿಂದ ಆತಿಥೇಯ ತಂಡಕ್ಕೆ ಗೆಲುವು ಸುಲಭವಲ್ಲ.
ಈ ಕ್ರೀಡಾಂಗಣದ ಪಿಚ್ ಮೊದಲಿನಿಂದಲೂ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡಿದೆ. ಆದ್ದರಿಂದ ಭಾರತ ತಂಡವು ನಾಲ್ವರು ಮಧ್ಯಮವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.
ಪಂದ್ಯ ನಡೆಯುವ ಐದು ದಿನಗಳಲ್ಲಿ ಕೆಲ ಹೊತ್ತು ಮಳೆ ಸುರಿಯುವ ಸಾಧ್ಯತೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.