ಬೆಂಗಳೂರು: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿರುವ ಟೀಂ ಇಂಡಿಯಾ ಉಪ ನಾಯಕಿ ಸ್ಮೃತಿ ಮಂದಾನ, ಮಾಜಿ ಕ್ರಿಕೆಟರ್ ಮಿಥಾಲಿ ರಾಜ್ ಅವರ ದಾಖಲೆಯನ್ನು ಸರಿಗಟ್ಟಿದರು.
ಆಫ್ರಿಕಾ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಶತಕ ಸಿಡಿಸಿದ ಸ್ಮೃತಿ, ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು.
ಈವರೆಗೆ 84 ಪಂದ್ಯಗಳಲ್ಲಿ ಆಡಿರುವ ಸ್ಮೃತಿ ಖಾತೆಯಲ್ಲಿ 7 ಶತಕಗಳಿವೆ. 232 ಪಂದ್ಯಗಳ 211 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದ ಮಿಥಾಲಿ ರಾಜ್ ಸಹ ಇಷ್ಟೇ ಶತಕ ಗಳಿಸಿದ್ದಾರೆ. ಉಳಿದಂತೆ ಭಾರತೀಯರ ಪಟ್ಟಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 132 ಪಂದ್ಯಗಳ 113 ಇನಿಂಗ್ಸ್‌ಗಳಲ್ಲಿ 6 ಸಲ ಮೂರಂಕಿ ದಾಟಿದ್ದಾರೆ.
ಒಟ್ಟಾರೆ ಹೆಚ್ಚು ಶತಕ ಸಿಡಿಸಿದ ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ (15), ನ್ಯೂಜಿಲೆಂಡ್‌ನ ಸೂಝಿ ಬೇಟ್ಸ್ (13) ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಭಾರತಕ್ಕೆ ಸರಣಿ ಜಯ
ಸ್ಮೃತಿ ಹಾಗೂ ಹರ್ಮನ್ ಸಿಡಿಸಿದ ಶತಕಗಳು ಮತ್ತು ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಲದಿಂದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯವನ್ನೂ ಗೆದ್ದು ಬೀಗಿತು.
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 325 ರನ್ ಗಳಸಿತು. ಸ್ಮೃತಿ 136 ರನ್ ಗಳಿಸಿದರೆ, ಹರ್ಮನ್ ಅಜೇಯ 103 ರನ್ ಸಿಡಿಸಿದರು.
ಈ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸಹ ದಿಟ್ಟ ಆಟವಾಡಿತು. ನಾಯಕಿ ಲೌರಾ ವೋಲ್ವಾರ್ಟ್ (ಅಜೇಯ 135 ರನ್) ಹಾಗೂ ಮರಿಜಾನ್ ಕಾಪ್ (114 ರನ್) ಶತಕ ಸಿಡಿಸಿ ಭಾರತದ ಪಾಳಯದಲ್ಲಿ ಭಯ ಮೂಡಿಸಿದರು. ಆದರೆ, ಪ್ರವಾಸಿ ಪಡೆ ಕೊನೇ ಓವರ್‌ನಲ್ಲಿ ಎಡವಿತು.
ಅರುಂಧತಿ ರೆಡ್ಡಿ ಎಸೆದ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಆಫ್ರಿಕಾ ತಂಡ ಗೆಲ್ಲಲು 11 ರನ್ ಬೇಕಿತ್ತು. ಮೊದಲ ಎರಡು ಎಸೆತಗಳಲ್ಲಿ 5 ರನ್ ಗಳಿಸಿದರೂ, ನಂತರ ಸತತ ಎರಡು ವಿಕೆಟ್ ಕಳೆದುಕೊಂಡದ್ದು ಆಫ್ರಿಕನ್ನರಿಗೆ ಹಿನ್ನಡೆ ಉಂಟುಮಾಡಿತು. ಕೊನೆಯ ಎರಡು ಎಸೆತಗಳಲ್ಲಿ 1 ರನ್ ಮಾತ್ರ ಬಿಟ್ಟುಕೊಟ್ಟ ಭಾರತ, 4 ರನ್ ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಸರಣಿಯನ್ನು 2–0 ಅಂತರದಿಂದ ವಶಪಡಿಸಿಕೊಂಡಿತು.
ಬೆಂಗಳೂರಿನಲ್ಲೇ ನಡೆದ ಸರಣಿಯ ಮೊದಲ ಪಂದ್ಯವನ್ನೂ ಭಾರತ ಗೆದ್ದಿತ್ತು. ಆ ಪಂದ್ಯದಲ್ಲಿಯೂ ಸ್ಮೃತಿ 117 ರನ್ ಬಾರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.