ಬೆಂಗಳೂರು: ಭಾರತ ತಂಡದ ಉಪನಾಯಕಿ ಸ್ಮೃತಿ ಮಂದಾನ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಶತಕದ ಹೊಸ್ತಿಲಲ್ಲಿ ಎಡವಿದರು. ಆದರೆ, ಅವರ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಲದಿಂದ ಹರ್ಮನ್‌ಪ್ರೀತ್ ಕೌರ್ ಬಳಗ, ಸರಣಿಯನ್ನು 3–0 ಅಂತರದಿಂದ ಗೆದ್ದುಕೊಂಡಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಡೆ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಆತಿಥೇಯರು ಇನ್ನೂ 9.2 ಓವರ್‌ಗಳು ಬಾಕಿ ಇರುವಂತೆಯೇ 220 ರನ್ ಗಳಿಸಿ ಆರು ವಿಕೆಟ್ ಅಂತರದ ಗೆಲುವಿನ ನಗೆ ಬೀರಿದರು.
ಆಫ್ರಿಕಾ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ನಾಯಕಿ ಲೌರಾ ವೋಲ್ವಾರ್ಟ್ (61 ರನ್) ಹಾಗೂ ತಝ್ಮಿನ್ ಬ್ರಿಟ್ಸ್ (38 ರನ್) ಮೊದಲ ವಿಕೆಟ್‌ಗೆ 102 ರನ್‌ಗಳ ಅಮೋಘ ಜೊತೆಯಾಟವಾಡಿದರು. ಆದರೆ, ಕೇವಲ 2 ರನ್ ಅಂತರದಲ್ಲಿ ಇಬ್ಬರೂ ಔಟಾದದ್ದು, ಆತಿಥೇಯರು ಮೇಲುಗೈ ಸಾಧಿಸಲು ನೆರವಾಯಿತು.
ಬಳಿಕ, ಪ್ರವಾಸಿ ಬ್ಯಾಟರ್‌ಗಳಿಂದ ದಿಟ್ಟ ಆಟ ಮೂಡಿಬರಲಿಲ್ಲ. ಹೀಗಾಗಿ, ಬೃಹತ್ ಮೊತ್ತದತ್ತ ಸಾಗಿದ್ದ ತಂಡ ಸಾಧಾರಣ ಮೊತ್ತಕ್ಕೆ ಕುಸಿಯಿತು.
ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಕನ್ನಡತಿ ಶ್ರೇಯಾಂಕಾ ಪಾಟೀಲ್, 10 ಓವರ್‌ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದರು. ಅರುಂದತಿ ರೆಡ್ಡಿ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಹಂಚಿಕೊಂಡರು. ಪೂಜಾ ವಸ್ತ್ರಾಕರ್ ಒಂದು ವಿಕೆಟ್ ಕಿತ್ತರು.
ಮತ್ತೆ ಮಿಂಚಿದ ಮಂದಾನ
ಸಾಧಾರಣ ಗುರಿ ಎದುರು ಮತ್ತೆ ಮಿಂಚಿದ ಮಂದಾನ 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಗಳಿಸಿ ಔಟಾದರು. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕ ಗಳಿಸುವ ಹಾಗೂ ಏಕದಿನ ಮಾದರಿಯಲ್ಲಿ ಭಾರತ ಪರ ಅತಿಹೆಚ್ಚು ಶತಕ ಗಳಿಸಿದ ಮಹಿಳಾ ಬ್ಯಾಟರ್ ಎನಿಸಿಕೊಳ್ಳುವ ಅವಕಾಶ ಕಳೆದುಕೊಂಡರು.
ಉಳಿದಂತೆ, ಇಂದಿನ ಪಂದ್ಯದಲ್ಲಿ ಶೆಫಾಲಿ ವರ್ಮಾ (25 ರನ್), ಪ್ರಿಯಾ ಪೂನಿಯಾ (28 ರನ್), ನಾಯಕಿ ಹರ್ಮನ್‌ಪ್ರೀತ್ ಕೌರ್ (42 ರನ್) ಹಾಗೂ ಜೆಮಿಮಾ ರಾಡ್ರಿಗಸ್ (ಅಜೇಯ 19 ರನ್) ಉಪಯುಕ್ತ ಆಟವಾಡುವ ಮೂಲಕ ಭಾರತಕ್ಕೆ ಸುಲಭ ಜಯ ತಂದಿತ್ತರು.
ಆಫ್ರಿಕಾ ಪರ ಅಯಬೊಂಗಾ ಖಾಕಾ, ತುಮಿ ಸೆಖುಖುನೆ, ಎನ್. ಮಾಲ್ಬಾ ತಲಾ ಒಂದೊಂದು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.