ADVERTISEMENT

ಭಾರತ vs ದ.ಆಫ್ರಿಕಾ ಪಂದ್ಯದಲ್ಲಿ ಶತಕಗಳ ಭರಾಟೆ; ಮಹಿಳಾ ಕ್ರಿಕೆಟ್‌ನಲ್ಲಿ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2024, 5:38 IST
Last Updated 20 ಜೂನ್ 2024, 5:38 IST
<div class="paragraphs"><p>ಶತಕದ ಸಂಭ್ರಮದಲ್ಲಿ ಸ್ಮೃತಿ ಮಂದಾನ,&nbsp;ಮರಿಜಾನ್ ಕಾಪ್,&nbsp;ಲೌರಾ ವೋಲ್ವಾರ್ಟ್,&nbsp;ಹರ್ಮನ್‌ಪ್ರೀತ್‌ ಕೌರ್‌</p><p></p></div>

ಶತಕದ ಸಂಭ್ರಮದಲ್ಲಿ ಸ್ಮೃತಿ ಮಂದಾನ, ಮರಿಜಾನ್ ಕಾಪ್, ಲೌರಾ ವೋಲ್ವಾರ್ಟ್, ಹರ್ಮನ್‌ಪ್ರೀತ್‌ ಕೌರ್‌

   

ಪಿಟಿಐ ಚಿತ್ರಗಳು

ADVERTISEMENT

ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಣ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ನಾಲ್ಕು ಶತಕಗಳು ಮೂಡಿಬಂದವು. ಇದರೊಂದಿಗೆ, ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ವಿಶೇಷ ದಾಖಲೆಯೊಂದು ನಿರ್ಮಾಣವಾದಂತಾಯಿತು.

ಬುಧವಾರ ನಡೆದ ಪಂದ್ಯದಲ್ಲಿ ರಚನೆಯಾದ ಈ ಅಪರೂಪದ ದಾಖಲೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಯಿತು.

ಭಾರತ ಪರ ಸ್ಮೃತಿ ಮಂದಾನ ಹಾಗೂ ಹರ್ಮನ್‌ಪ್ರೀತ್‌ ಕೌರ್‌, ದಕ್ಷಿಣ ಆಫ್ರಿಕಾ ಪರ ಲೌರಾ ವೋಲ್ವಾರ್ಟ್ ಹಾಗೂ ಮರಿಜಾನ್ ಕಾಪ್ ಶತಕ ಸಿಡಿಸಿ ಸಾಧನೆ ಮಾಡಿದರು.

ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ನಡುವಣ 2018ರಲ್ಲಿ ನಡೆದ ಪಂದ್ಯದಲ್ಲಿ 3 ಶತಕಗಳು ದಾಖಲಾಗಿದ್ದದ್ದು, ಇದುವರೆಗೆ ದಾಖಲೆಯಾಗಿತ್ತು. ಈಸ್ಟ್‌ ಸಸ್ಸೆಕ್ಸ್‌ನ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್‌ನ ಟಾಮಿ ಬ್ಯೂಮಂಟ್‌ (101 ರನ್‌) ಹಾಗೂ ಸಾರಾ ಟೇಲರ್‌ (118 ರನ್‌), ದಕ್ಷಿಣ ಆಫ್ರಿಕಾ ಪರ ಲಿಝೆಲ್ಲೆ ಲೀ (117) ಶತಕ ಬಾರಿಸಿದ್ದರು. ಆ ಪಂದ್ಯವನ್ನು ಆತಿಥೇಯ ಇಂಗ್ಲೆಂಡ್‌ 69 ರನ್‌ಗಳಿಂದ ಗೆದ್ದುಕೊಂಡಿತ್ತು.

ಭಾರತಕ್ಕೆ ಸರಣಿ ಜಯ
ಬುಧವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ, 4 ರನ್‌ ಅಂತರದ ರೋಚಕ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಯುವ ಆಟಗಾರ್ತಿ ಶೆಫಾಲಿ ವರ್ಮಾ ಜೊತೆ ಇನಿಂಗ್ಸ್‌ ಆರಂಭಿಸಿದ ಉಪನಾಯಕಿ ಸ್ಮೃತಿ ಮಂದಾನ, ಸರಣಿಯಲ್ಲಿ ಸತತ ಎರಡನೇ ಶತಕ ಸಿಡಿಸಿದರು. 120 ಎಸೆತಗಳನ್ನು ಎದುರಿಸಿದ ಅವರು 18 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 136 ರನ್ ಗಳಿಸಿದರು. ಅವರೊಂದಿಗೆ ಇನ್ನೊಂದು ತುದಿಯಲ್ಲಿ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅಜೇಯ 103 ರನ್ ಸಿಡಿಸಿದರು.

ಕೊನೆಯಲ್ಲಿ ಗುಡುಗಿದ ಯುವ ಬ್ಯಾಟರ್‌ ರಿಚಾ ಘೋಷ್‌ 13 ಎಸೆತಗಳಲ್ಲಿ 25 ರನ್‌ ಬಾರಿಸಿ ಔಟಾಗದೆ ಉಳಿದರು. ಇವರ ಆಟದ ಬಲದಿಂದ ಭಾರತ, ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 325 ರನ್‌ ಗಳಿಸಿತು.

ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸಹ ದಿಟ್ಟ ಆಟವಾಡಿತು. ನಾಯಕಿ ಲೌರಾ ವೋಲ್ವಾರ್ಟ್ ಹಾಗೂ ಮರಿಜಾನ್ ಕಾಪ್ ಸಿಡಿಸಿದ ಅಮೋಘ ಶತಕಗಳ ಬಲದಿಂದ ಕೊನೇ ಎಸೆತದವರೆಗೂ ಹೋರಾಟ ನಡೆಸಿತು.

135 ಎಸೆತಗಳ ದೀರ್ಘ ಇನಿಂಗ್ಸ್‌ ಆಡಿದ ಲೌರಾ 135 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ಉತ್ತಮ ಜೊತೆಯಾಟ ಕಟ್ಟಿದ ಕಾಪ್ 94 ಎಸೆತಗಳಲ್ಲೇ 114 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇವರಿಬ್ಬರು, 4ನೇ ವಿಕೆಟ್‌ ಪಾಲುದಾರಿಕೆಯಲ್ಲಿ 184 ರನ್‌ ಕಲೆಹಾಕಿದರು.

ಕಾಪ್ ಔಟಾದ ಬಳಿಕ ಬಂದ ನಾಡೈನ್ ಡಿ ಕ್ಲರ್ಕ್ (28) ಸಹ ಲೌರಾ ಜೊತೆ ಭಾರತ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆದಾಗ್ಯೂ, ಕೊನೇ ಓವರ್‌ನಲ್ಲಿ ಹಿಡಿತ ಸಾಧಿಸಿದ ಆತಿಥೇಯರು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು.

ಇದರೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು 2–0 ಅಂತರದಿಂದ ವಶಪಡಿಸಿಕೊಂಡಿತು.

ಬೆಂಗಳೂರಿನಲ್ಲೇ ನಡೆದ ಮೊದಲ ಪಂದ್ಯವನ್ನೂ ಭಾರತ ಗೆದ್ದಿತ್ತು. ಆ ಪಂದ್ಯದಲ್ಲಿಯೂ ಸ್ಮೃತಿ 117 ರನ್‌ ಬಾರಿಸಿದ್ದರು. ಅಂತಿಮ ಪಂದ್ಯ ಭಾನುವಾರ (ಜೂನ್‌ 23ರಂದು) ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.