ಮುಂಬೈ: ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಭಾರತ ‘ಎ’ ಮಹಿಳೆಯರ ತಂಡದವರು ಆಸ್ಟ್ರೇಲಿಯಾ ‘ಎ’ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯನ್ನು ಗೆಲ್ಲುವ ಭರವಸೆಯಲ್ಲಿದ್ದಾರೆ. ಮೂರು ಪಂದ್ಯಗಳ ಸರಣಿಯ ನಿರ್ಣಾಯಕ ಪಂದ್ಯ ಬುಧವಾರ ಇಲ್ಲಿನ ಬಿಕೆಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ‘ಎ’ ತಂಡ ಹೀನಾಯವಾಗಿ ಸೋತಿತ್ತು. ಆದರೆ ಟ್ವೆಂಟಿ –20 ಸರಣಿಯ ಮೊದಲ ಪಂದ್ಯದಲ್ಲಿ ತಿರುಗೇಟು ನೀಡಿತ್ತು. 161 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ್ದ ತಂಡ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತ್ತು.
ನಾಲ್ಕು ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದರೂ ಸ್ಮೃತಿ ಮತ್ತು ಹರ್ಮನ್‌ಪ್ರೀತ್ ಎದೆಗುಂದದೆ ಇನಿಂಗ್ಸ್ ಮುನ್ನಡೆಸಿದ್ದರು. ಕೆಳ ಕ್ರಮಾಂಕದ ಪೂಜಾ ವಸ್ತ್ರಕಾರ್ ಮತ್ತು ದೀಪ್ತಿ ಶರ್ಮಾ ಕೂಡ ಉತ್ತಮ ಬ್ಯಾಟಿಂಗ್ ಮಾಡಿ ಮಿಂಚಿದ್ದರು. ಹೀಗಾಗಿ ತಂಡದ ಬ್ಯಾಟಿಂಗ್ ವಿಭಾಗ ಈಗ ಭರವಸೆಯಲ್ಲಿದೆ.
ಪೂಜಾ, ದೀಪ್ತಿ, ಏಕ್ತಾ ಬಿಸ್ಟ್ ಮತ್ತು ಅನುಜಾ ಪಾಟೀಲ್ ಬಲಿಷ್ಠ ಬ್ಯಾಟಿಂಗ್ ಬಳಗವನ್ನು ಹೊಂದಿರುವ ಆಸ್ಟ್ರೇಲಿಯಾ ‘ಎ’ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಆದ್ದರಿಂದ ಭಾರತ ‘ಎ’ ಪಾಳಯದ ಬೌಲಿಂಗ್ ವಿಭಾಗವೂ ನಿಶ್ಚಿಂತವಾಗಿದೆ.
ಪಂದ್ಯ ಆರಂಭ: ಬೆಳಿಗ್ಗೆ 9.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.