ಕ್ರೈಸ್ಟ್‌ಚರ್ಚ್: ನಿರ್ಣಾಯಕ ಘಟ್ಟದಲ್ಲಿ ಒಂಬತ್ತು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ‘ಎ’ ತಂಡ ನ್ಯೂಜಿಲೆಂಡ್ ‘ಎ’ ಎದುರಿನ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಐದು ರನ್‌ಗಳಿಂದ ಸೋತಿದೆ. ಇದರೊಂದಿಗೆ ಮಯಂಕ್ ಅಗರವಾಲ್ ಬಳಗದ ಸರಣಿ ಜಯದ ಕನಸು ಭಗ್ನಗೊಂಡಿದೆ.
ಹೇಗ್ಲೆ ಓವಲ್ ಮೈದಾನದಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ಟಾಮ್ ಬ್ರೂಸ್ ಸಾರಥ್ಯದ ನ್ಯೂಜಿಲೆಂಡ್ ‘ಎ’, 50 ಓವರ್‌ಗಳಲ್ಲಿ 7 ವಿಕೆಟ್‌ಗೆ 270ರನ್ ದಾಖಲಿಸಿತು. 98ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆತಿಥೇಯರಿಗೆ ಮಾರ್ಕ್ ಚಾಪ್‌ಮನ್ ಆಸರೆಯಾದರು. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಚಾಪ್‌ಮನ್ ಆಕರ್ಷಕ ಶತಕ (ಔಟಾಗದೆ 110; 98ಎ, 10ಬೌಂ, 1ಸಿ) ಸಿಡಿಸಿ ಗಮನ ಸೆಳೆದರು.
ಗುರಿ ಬೆನ್ನಟ್ಟಿದ ಭಾರತ ತಂಡ 49.4 ಓವರ್‌ಗಳಲ್ಲಿ 265ರನ್ ಗಳಿಸಿ ಹೋರಾಟ ಮುಗಿಸಿತು. ಮಯಂಕ್ ಪಡೆಯ ಗೆಲುವಿಗೆ ಕೊನೆಯ ಎರಡು ಓವರ್‌ಗಳಲ್ಲಿ 18ರನ್‌ಗಳು ಬೇಕಿದ್ದವು.
ಅಕ್ಷರ್ ಪಟೇಲ್ (32; 28ಎ, 2ಬೌಂ), ರಾಹುಲ್ ಚಾಹರ್ (0), ಸಂದೀಪ್ ವಾರಿಯರ್ (0) ಮತ್ತು ಇಶಾನ್ ಪೊರೆಲ್ (0) ಬೇಗನೆ ವಿಕೆಟ್ ಒಪ್ಪಿಸಿದ್ದರಿಂದ ಪ್ರವಾಸಿ ಬಳಗ ಸೋಲಿನ ಸುಳಿಯಲ್ಲಿ ಸಿಲುಕಿತು.
ವಿಕೆಟ್ ಕೀಪರ್ ಇಶಾನ್ ಕಿಶನ್ (ಔಟಾಗದೆ 71; 84ಎ, 8ಬೌಂ) ಏಕಾಂಗಿಯಾಗಿ ಹೋರಾಡಿದರೂ ಪ್ರಯೋಜನವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ‘ಎ’: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 270 (ಗ್ಲೆನ್ ಫಿಲಿಪ್ಸ್ 35, ಟಾಮ್ ಬ್ಲಂಡಲ್ 37, ಮಾರ್ಕ್ ಚಾಪ್‌ಮನ್ ಔಟಾಗದೆ 110, ಟಾಡ್ ಆ್ಯಷ್ಲೆ 56, ಕೈಲ್ ಜೆಮಿಸನ್ ಔಟಾಗದೆ 13; ಸಂದೀಪ್ ವಾರಿಯರ್ 36ಕ್ಕೆ1, ಇಶಾನ್ ಪೊರೆಲ್ 64ಕ್ಕೆ3, ರಾಹುಲ್ ಚಾಹರ್ 49ಕ್ಕೆ2, ಅಕ್ಷರ್ ಪಟೇಲ್ 46ಕ್ಕೆ1).
ಭಾರತ ‘ಎ’: 49.4 ಓವರ್‌ಗಳಲ್ಲಿ 265 (ಪೃಥ್ವಿ ಶಾ 55, ಋತುರಾಜ್ ಗಾಯಕವಾಡ್ 44, ಮಯಂಕ್ ಅಗರವಾಲ್ 24, ಇಶಾನ್ ಕಿಶನ್ ಔಟಾಗದೆ 71, ವಿಜಯ್ ಶಂಕರ್ 19, ಅಕ್ಷರ್ ಪಟೇಲ್ 32; ಕೈಲ್ ಜೆಮಿಸನ್ 49ಕ್ಕೆ4, ಅಜಾಜ್ ಪಟೇಲ್ 44ಕ್ಕೆ3, ರಚಿನ್ ರವೀಂದ್ರ 43ಕ್ಕೆ2).
ಫಲಿತಾಂಶ: ನ್ಯೂಜಿಲೆಂಡ್ ‘ಎ’ ತಂಡಕ್ಕೆ 5ರನ್ ಗೆಲುವು. 2–1ರಿಂದ ಸರಣಿ ಕೈವಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.