ADVERTISEMENT

ಮುಕೇಶ್ ದಾಳಿಗೆ ತಡಬಡಾಯಿಸಿದ ನ್ಯೂಜಿಲೆಂಡ್ ಯುವಪಡೆ

ಭಾರತ‘ಎ’–ನ್ಯೂಜಿಲೆಂಡ್ ‘ಎ’ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿ; ಕಾರ್ಟರ್ ಅರ್ಧಶತಕ

ಗಿರೀಶದೊಡ್ಡಮನಿ
Published 1 ಸೆಪ್ಟೆಂಬರ್ 2022, 16:27 IST
Last Updated 1 ಸೆಪ್ಟೆಂಬರ್ 2022, 16:27 IST
ವಿಕೆಟ್ ಗಳಿಸಿದ ಮುಕೇಶ್ ಕುಮಾರ್ ಅವರನ್ನು ಅಭಿನಂದಿಸಿದ ಸಹ ಆಟಗಾರರು –ಪ್ರಜಾವಾಣಿ ಚಿತ್ರ/ವಿ. ಪುಷ್ಕರ್
ವಿಕೆಟ್ ಗಳಿಸಿದ ಮುಕೇಶ್ ಕುಮಾರ್ ಅವರನ್ನು ಅಭಿನಂದಿಸಿದ ಸಹ ಆಟಗಾರರು –ಪ್ರಜಾವಾಣಿ ಚಿತ್ರ/ವಿ. ಪುಷ್ಕರ್   

ಬೆಂಗಳೂರು: ಗುರುವಾರ ಮಧ್ಯಾಹ್ನ ಮಳೆ ಸುರಿಯುವ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಂಗಾಳದ ಹುಡುಗ ಮುಕೇಶ್ ಕುಮಾರ್ ಸ್ವಿಂಗ್ ದಾಳಿ ಬಿರುಗಾಳಿಗೆ ನ್ಯೂಜಿಲೆಂಡ್ ಎ ತಂಡವು ತಡಬಡಾಯಿಸಿತು.

ಇದರಿಂದಾಗಿ ಇಲ್ಲಿ ಆರಂಭವಾದ ಪ್ರಥಮ ‘ಟೆಸ್ಟ್‌’ನಲ್ಲಿ ನ್ಯೂಜಿಲೆಂಡ್ ಎ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 61 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 156 ರನ್‌ ಸೇರಿಸಿತು.ಜೋ ಕಾರ್ಟರ್ (ಬ್ಯಾಟಿಂಗ್ 73, 170ಎಸೆತ, 4X10) ಕ್ರೀಸ್‌ನಲ್ಲಿದ್ಧಾರೆ.

ಟಾಸ್ ಗೆದ್ದ ಪ್ರವಾಸಿ ಬಳಗವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ‘ಎ’ ತಂಡದ ಮಧ್ಯಮವೇಗಿ ಮುಕೇಶ್ ಕುಮಾರ್ (13–4–34–3) ದಾಳಿಯ ಮುಂದೆ ಆರಂಭದಲ್ಲಿಯೇ ತತ್ತರಿಸಿತು. ಮುಕೇಶ್ ಹೊಸಚೆಂಡಿನಲ್ಲಿ (4.3 ಓವರ್) ಮೊದಲ ವಿಕೆಟ್ ಗಳಿಸಿದರು. ಊಟದ ವಿರಾಮದ ನಂತರ ಹಾಗೂ ಚಹಾ ವಿರಾಮದ ಬಳಿಕ ತಲಾ ಒಂದು ವಿಕೆಟ್ ಕೆಡವಿದರು. ಇದರಿಂದಾಗಿ ಎದುರಾಳಿ ತಂಡದ ಓಟ ಗಳಿಕೆಯ ವೇಗ ತಗ್ಗಿತು.

ADVERTISEMENT

ಆದರೆ, ಜೋ ಕಾರ್ಟರ್ ಮಾತ್ರ ಚೆಂದದ ಬ್ಯಾಟಿಂಗ್ ಮಾಡಿದರು. ತಾಳ್ಮೆಯುತ ಆಟದಲ್ಲಿ ಅರ್ಧಶತಕ ಗಳಿಸಿದರು. ಅವರಿಗೆ ರಾಬರ್ಟ್ ಒಡೆನಿಲ್ (24; 55ಎ) ಹಾಗೂ ಕ್ಯಾಮ್ ಫ್ಲೆಚರ್ (13; 66ಎ) ಉತ್ತಮ ಜೊತೆ ನೀಡಿದರು. ಈ ಇಬ್ಬರ ವಿಕೆಟ್‌ಗಳನ್ನೂ ಮುಕೇಶ್ ತಮ್ಮ ಎಲ್‌ಬಿಡಬ್ಲ್ಯು ಬಲೆಗೆ ಹಾಕಿಕೊಂಡಿದ್ದರಿಂದ ದೊಡ್ಡ ಜೊತೆಯಾಟಗಳು ಮುರಿದುಬಿದ್ದವು.

ಯಶ್ ದಯಾಳ್ ಹಾಗೂ ನಾಗವಸಾವಲ್ಲಾ ಕೂಡ ತಲಾ ಒಂದು ವಿಕೆಟ್ ಗಳಿಸಿದರು. ಆತಿಥೇಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಅವರ ಬೌಲಿಂಗ್ ಹಾಗೂ ಫೀಲ್ಡಿಂಗ್ ತಂತ್ರಗಾರಿಕೆ ಫಲ ನೀಡಿತು.

ಚಹಾ ವಿರಾಮದ ನಂತರದಲ್ಲಿ ಮಳೆ ಸುರಿಯಿತು. ನಂತರ ಮಂದ ಬೆಳಕಿನ ಕಾರಣ ಆಟವನ್ನು ಸ್ಥಗಿತಗೊಳಿಸಲಾಯಿತು.

ಸಂಕ್ಷಿಪ್ತ ಸ್ಕೋರು:

ನ್ಯೂಜಿಲೆಂಡ್ : 61 ಓವರ್‌ಗಳಲ್ಲಿ 5ಕ್ಕೆ156 (ಜೋ ಕಾರ್ಟರ್ ಬ್ಯಾಟಿಂಗ್ 73, ಮಾರ್ಕ್ ಚಾಪ್‌ಮನ್ 15, ರಚಿನ್ ರವೀಂದ್ರ 12, ರಾಬರ್ಟ್ ಒಡೊನಿಲ್ 24, ಕ್ಯಾಮ್ ಫ್ಲೆಚರ್ 13, ಮುಕೇಶ್ ಕುಮಾರ್ 34ಕ್ಕೆ3, ಯಶ್ ದಯಾಳ್ 35ಕ್ಕೆ1, ಅರ್ಜಾನ್ ನಾಗವಸವಲ್ಲಾ 34ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.