ಹರಾರೆ: ಪ್ರವಾಸಿ ಭಾರತ ತಂಡಕ್ಕೆ ಸರಣಿ ಕೈವಶ ಮಾಡಿಕೊಳ್ಳುವತ್ತ ಚಿತ್ತ. ಆತಿಥೇಯ ಜಿಂಬಾಬ್ವೆಗೆ ಸರಣಿ ಜಯದ ಅವಕಾಶ ಜೀವಂತವಾಗಿಟ್ಟುಕೊಳ್ಳುವ ಛಲ.
ಇದರಿಂದಾಗಿಯೇ ಉಭಯ ತಂಡಗಳ ನಡುವಣ ಶನಿವಾರ ಇಲ್ಲಿ ನಡೆಯಲಿರುವ ಟಿ20 ಸರಣಿಯ ನಾಲ್ಕನೇ ಪಂದ್ಯವು ಕುತೂಹಲ ಕೆರಳಿಸಿದೆ. ಸರಣಿಯಲ್ಲಿ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು 2–1ರ ಮುನ್ನಡೆಯಲ್ಲಿದೆ.
ಮೊದಲ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿದ್ದ ಜಿಂಬಾಬ್ವೆಯ ವಿರುದ್ಧದ ಇನ್ನೆರಡು ಪಂದ್ಯಗಳಲ್ಲಿ ಗಿಲ್ ಬಳಗವು ಅಧಿಕಾರಯುತ ಜಯ ಗಳಿಸಿತ್ತು. ಆದ್ದರಿಂದ ಈ ಹಣಾಹಣಿಯಲ್ಲಿಯೂ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.
ಉಭಯ ತಂಡಗಳಲ್ಲಿಯೂ ಇರುವ ಯುವಪ್ರತಿಭೆಗಳು ತಮ್ಮ ಸಾಮರ್ಥ್ಯ ಮೆರೆಯುವ ಉತ್ಸಾಹದಲ್ಲಿವೆ. ಭಾರತ ತಂಡದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಈಗಾಗಲೇ ತಮ್ಮ ಚೆಂದದ ಆಟದ ಮೂಲಕ ಗೆಲುವಿನ ರೂವಾರಿಗಳಾಗಿದ್ದಾರೆ.
ಟಿ20 ಮಾದರಿಯಿಂದ ರವೀಂದ್ರ ಜಡೇಜ ಅವರು ನಿವೃತ್ತಿಯಾಗಿದ್ದಾರೆ. ಅದರಿಂದಾಗಿ ಸ್ಪಿನ್–ಆಲ್‌ರೌಂಡರ್ ಸ್ಥಾನ ತುಂಬಲು ವಾಷಿಂಗ್ಟನ್ ಪೈಪೋಟಿ ನಡೆಸಿದ್ದಾರೆ. ಅವರು ಪ್ರಸಕ್ತ ಸರಣಿಯಲ್ಲಿ ಆರು ವಿಕೆಟ್‌ಗಳನ್ನು 4.5ರ ಎಕಾನಮಿಯಲ್ಲಿ ಗಳಿಸಿದ್ದಾರೆ.
ಮುಂಬರಲಿರುವ ಶ್ರೀಲಂಕಾ ವಿರುದ್ಧದ ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆಗಾರರ ಸಮಿತಿಯು ವಾಷಿಂಗ್ಟನ್ ಅವರನ್ನು ಪರಿಗಣಿಸುವ ಸಾಧ್ಯತೆ ಹೆಚ್ಚಿದೆ.
ತಮಿಳುನಾಡಿನ 24 ವರ್ಷದ ವಾಷಿಂಗ್ಟನ್, ಪವರ್‌ಪ್ಲೇ ಮತ್ತು ನಂತರದ ಓವರ್‌ಗಳಲ್ಲಿಯೂ ತಮ್ಮ ಸ್ಪಿನ್ ಕೈಚಳಕ ತೋರುವ ಸಮರ್ಥರು. ಕೆಳಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ರನ್ ಗಳಿಸಬಲ್ಲ ಬ್ಯಾಟರ್ ಕೂಡ ಹೌದು.
ಸರಣಿಯ ಎರಡನೇ ಪಂದ್ಯದಲ್ಲಿ ಅಭಿಷೇಕ್ 47 ಎಸೆತಗಳಲ್ಲಿ ಶತಕ ಗಳಿಸಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಬ್ಬರ ಶೈಲಿಗಳ ಮಿಶ್ರಣದಂತಿರುವ ಅಭಿಷೇಕ್ ಆಟವು ಬಹುನಿರೀಕ್ಷೆ ಮೂಡಿಸಿದೆ. ಅಗ್ರಕ್ರಮಾಂಕದ ಬ್ಯಾಟಿಂಗ್ ಸ್ಥಾನಕ್ಕೆ ಅಭಿಷೇಕ್ ಅವರೊಂದಿಗೆ ಯಶಸ್ವಿ ಜೈಸ್ವಾಲ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ಅವರಲ್ಲದೇ ನಾಯಕ ಶುಭಮನ್ ಗಿಲ್ ಮತ್ತು ಋತುರಾಜ್ ಗಾಯಕವಾಡ್ ಅವರೂ ಇದೇ ಸಾಲಿನಲ್ಲಿದ್ದಾರೆ. ಅವರಿಂದ ದೊಡ್ಡ ಇನಿಂಗ್ಸ್ ಮೂಡಿಬರುವ ನಿರೀಕ್ಷೆ ಇದೆ. ಅನುಭವಿ ಸಂಜು ಸ್ಯಾಮ್ಸನ್, ಆಲ್‌ರೌಂಡರ್ ಶಿವಂ ದುಬೆ ಅವರಿಗೆ ಈ ಸರಣಿಯಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ. ಅವರಿಬ್ಬರೂ ಈಚೆಗೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದರು.
ಬೌಲಿಂಗ್‌ನಲ್ಲಿ ಖಲೀಲ್ ಅಹಮದ್, ಮುಕೇಶ್ ಕುಮಾರ್ ಹಾಗೂ ಸ್ಪಿನ್ನರ್ ರವಿ ಬಿಷ್ಣೋಯಿ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸಬಲ್ಲ ಸಮರ್ಥರು.
ಆತಿಥೇಯ ತಂಡದ ನಾಯಕ ಸಿಕಂದರ್ ರಝಾ, ಮಧ್ಯಮ ಕ್ರಮಾಂಕದ ಬ್ಯಾಟರ್ ಡಿಯಾನ್ ಮೇಯರ್ಸ್ ಹಾಗೂ ಕ್ಲೈವ್ ಮೆಡಾಂದೆ ಅವರು ಉತ್ತಮ ಲಯದಲ್ಲಿದ್ಧಾರೆ. ಬೌಲಿಂಗ್ ವಿಭಾಗವು ಇನ್ನಷ್ಟು ಸುಧಾರಣೆ ಗೊಳ್ಳಬೇಕಿರುವುದನ್ನು ಅಲ್ಲಗಳೆಯಲಾಗದು.
ಪಂದ್ಯ ಆರಂಭ: ಸಂಜೆ 4.30
ನೇರಪ್ರಸಾರ:
ಸರಣಿಯಲ್ಲಿ 2–1ರ ಮುನ್ನಡೆಯಲ್ಲಿರುವ ಭಾರತ ತಂಡ ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್ ಮೇಲೆ ಕಣ್ಣು ಲಯಕ್ಕೆ ಮರಳುವ ವಿಶ್ವಾಸದಲ್ಲಿ ಶುಭಮನ್ ಗಿಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.