ADVERTISEMENT

ಗಿಲ್‌ ಶತಕ: ಏಕದಿನ ಕ್ರಿಕೆಟ್ ಸರಣಿ ಕ್ಲೀನ್‌ಸ್ವೀಪ್‌ ಮಾಡಿದ:ಭಾರತ

ಏಕದಿನ ಕ್ರಿಕೆಟ್ ಸರಣಿ: ಜಿಂಬಾಬ್ವೆ ಸೋಲಿನಲ್ಲೂ ಮಿಂಚಿದ ಸಿಕಂದರ್‌ ರಝಾ

ಪಿಟಿಐ
Published 22 ಆಗಸ್ಟ್ 2022, 19:32 IST
Last Updated 22 ಆಗಸ್ಟ್ 2022, 19:32 IST
ಶತಕ ಗಳಿಸಿದ ಶುಭಮನ್‌ ಗಿಲ್‌ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಶತಕ ಗಳಿಸಿದ ಶುಭಮನ್‌ ಗಿಲ್‌ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಹರಾರೆ: ಯುವ ಆಟಗಾರ ಶುಭಮನ್ ಗಿಲ್‌ ಅವರ ಚೊಚ್ಚಲ ಶತಕ ಭಾರತದ ಸರಣಿ ‘ಕ್ಲೀನ್‌ಸ್ವೀಪ್‌’ ಸಾಧನೆಗೆ ಕಾರಣವಾದರೆ, ಸಿಕಂದರ್‌ ರಝಾ ಅವರ ಹೋರಾಟದ ಶತಕ ಜಿಂಬಾಬ್ವೆಗೆ ಸೋಲಿನಲ್ಲೂ ಅಲ್ಪ ಸಮಾಧಾನ ನೀಡಿತು.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂ
ಗಣದಲ್ಲಿ ಸೋಮವಾರ ನಡೆದ ಮೂರನೇ ಏಕದಿನ ಪಂದ್ಯವನ್ನು ಭಾರತ 13 ರನ್‌ಗಳಿಂದ ಗೆದ್ದಿತು. ಇದರೊಂದಿಗೆ ಕೆ.ಎಲ್‌.ರಾಹುಲ್‌ ಬಳಗ ಸರಣಿಯನ್ನು 3–0 ರಲ್ಲಿ ಜಯಿಸಿತು.

ಮೊದಲ ಬ್ಯಾಟ್‌ ಮಾಡಿದ ಭಾರತ ಶುಭಮನ್‌ (130ರನ್‌, 97 ಎ., 4X15, 6X1) ಅವರ ಭರ್ಜರಿ ಶತಕದ ಬಲದಿಂದ 8 ವಿಕೆಟ್‌ಗೆ 289 ರನ್‌ ಪೇರಿಸಿದರೆ, ಆತಿಥೇಯ ತಂಡ 49.3 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟಾಯಿತು.

ADVERTISEMENT

ಅನುಭವಿ ಬ್ಯಾಟರ್‌ ಸಿಕಂದರ್‌ ರಝಾ ಏಕಾಂಗಿ ಹೋರಾಟ ನಡೆಸಿ ಶತಕ ಗಳಿಸಿದರೂ (115 ರನ್‌, 95 ಎ., 4X9, 6X3) ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು.

ಸವಾಲಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ, ಕುಲದೀಪ್‌ ಯಾದವ್‌ (38ಕ್ಕೆ 2) ಮತ್ತು ಅಕ್ಷರ್ ಪಟೇಲ್‌ (30ಕ್ಕೆ 2) ಅವರ ಸ್ಪಿನ್‌ ದಾಳಿಗೆ ನಲುಗಿ 122 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡಿತು. 36ನೇ ಓವರ್‌ನಲ್ಲಿ 7 ವಿಕೆಟ್‌ಗೆ 169 ರನ್‌ ಗಳಿಸಿ ಸೋಲಿನ ಹಾದಿ ಹಿಡಿದಿತ್ತು.

ಆದರೆ ಸುಲಭದಲ್ಲಿ ತಲೆಬಾಗಲು ಸಿದ್ಧರಿಲ್ಲದ ರಝಾ, ಮರುಹೋರಾಟ ನಡೆಸಿದರು. ಅವರಿಗೆ ಬ್ರಾಡ್‌ ಇವಾನ್ಸ್‌ (28, 36 ಎ.) ತಕ್ಕ ಸಾಥ್‌ ನೀಡಿದರು. ಈ ಜೋಡಿ ಎಂಟನೇ ವಿಕೆಟ್‌ಗೆ 77 ಎಸೆತಗಳಲ್ಲಿ 104 ರನ್‌ ಸೇರಿಸಿತು.

ಆತಿಥೇಯರ ಗೆಲುವಿಗೆ ಕೊನೆಯ 3 ಓವರ್‌ಗಳಲ್ಲಿ 33 ರನ್‌ಗಳು ಬೇಕಿದ್ದವು. ಆವೇಶ್‌ ಖಾನ್‌ ಬೌಲ್‌ ಮಾಡಿದ 47ನೇ ಓವರ್‌ನ ಮೊದಲ ಐದು ಎಸೆತಗಳಲ್ಲಿ ಇಬ್ಬರೂ 16 ರನ್‌ ಕಲೆಹಾಕಿದರು. ಆದರೆ ಕೊನೆಯ ಎಸೆತದಲ್ಲಿ ಇವಾನ್ಸ್‌ ಎಲ್‌ಬಿ ಬಲೆಗೆ ಬಿದ್ದರು.

ಶಾರ್ದೂಲ್‌ ಠಾಕೂರ್‌ ಬೌಲ್‌ ಮಾಡಿದ ಮುಂದಿನ ಓವರ್‌ನಲ್ಲಿ ಸಿಕಂದರ್‌ ಅವರು ಶುಭಮನ್‌ ಗಿಲ್‌ ಹಿಡಿದ ಉತ್ತಮ ಕ್ಯಾಚ್‌ಗೆ ಔಟಾಗುವುದರೊಂದಿಗೆ ಜಿಂಬಾಬ್ವೆಯ ಅಚ್ಚರಿಯ ಗೆಲುವಿನ ಕನಸು ನುಚ್ಚುನೂರಾಯಿತು.

ಗಿಲ್‌ ಮೆರೆದಾಟ: ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭ ನಿಧಾನವಾಗಿತ್ತು. 15 ಓವರ್‌ಗಳಲ್ಲಿ 63 ರನ್‌ ಮಾತ್ರ ಪೇರಿಸಿತು. ಶಿಖರ್‌ ಧವನ್‌ (40) ಮತ್ತು ಕೆ.ಎಲ್‌.ರಾಹುಲ್‌ (30) ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಆಡುತ್ತಿರುವ ರಾಹುಲ್‌, ಸಾಮರ್ಥ್ಯ ತೋರಿಸಲು ತಮಗೆ ಲಭಿಸಿದ ಉತ್ತಮ ಅವಕಾಶ ಹಾಳುಮಾಡಿಕೊಂಡರು. ಯುವ ಆಟಗಾರರಾದ ಗಿಲ್ ಮತ್ತು ಇಶಾನ್‌ ಕಿಶನ್‌ (50, 61 ಎ.) ಜತೆಯಾದ ಬಳಿಕ ಸ್ಕೋರಿಂಗ್‌ನ ವೇಗ ಹೆಚ್ಚಿತು. ಆರಂಭದಲ್ಲಿ ಅಲ್ಪ ತಿಣುಕಾಡಿದರೂ, ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು. ಮೂರನೇ ವಿಕೆಟ್‌ಗೆ ಇವರು 140ರನ್‌ ಸೇರಿಸಿದರು.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೂರು ವರ್ಷಗಳ ಬಳಿಕ ಗಿಲ್‌ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು. ಅಂಗಳದ ಮೂಲೆ ಮೂಲೆಗೆ ಚೆಂಡನ್ನಟ್ಟಿದ ಅವರು ಸ್ಟ್ರೇಟ್ ಡ್ರೈವ್‌ ಮತ್ತು ಕವರ್‌ ಡ್ರೈವ್‌ಗಳ ಮೂಲಕ ಇನಿಂಗ್ಸ್‌ನ ಕಳೆ ಹೆಚ್ಚಿಸಿದರು. ಕೊನೆಯ ಓವರ್‌ನಲ್ಲಿ ಅವರು ಔಟಾದರು.

ಗಿಲ್‌ ಚೊಚ್ಚಲ ಶತಕ ಸಾಧನೆ: 97 ಎಸೆತಗಳಲ್ಲಿ 130 ರನ್‌

ಸ್ಕೋರ್‌ ಕಾರ್ಡ್‌

ಭಾರತ 8ಕ್ಕೆ 289 (50 ಓವರ್‌)

ಧವನ್‌ ಸಿ ವಿಲಿಯಮ್ಸ್‌ ಬಿ ಇವಾನ್ಸ್‌ 40 (68 ಎ., 4X5), ರಾಹುಲ್‌ ಬಿ ಇವಾನ್ಸ್ 30 (46 ಎ., 4X1, 6X1), ಗಿಲ್‌ ಸಿ ಕೈಯಾ ಬಿ ಇವಾನ್ಸ್ 130 (97 ಎ., 4X15, 6X1), ಇಶಾನ್‌ ರನೌಟ್‌ 50 (61 ಎ., 4X6), ಹೂಡಾ ಬಿ ಇವಾನ್ಸ್‌ 1 (3 ಎ), ಸಂಜು ಸಿ ಕೈಟಾನೊ ಬಿ ಜಾಂಗ್ವೆ 15 (13 ಎ., 6X2), ಅಕ್ಷರ್‌ ಸಿ ರಝಾ ಬಿ ನಯುಚಿ 1 (4 ಎ), ಶಾರ್ದೂಲ್‌ ಸಿ ನಯುಚಿ ಬಿ ಇವಾನ್ಸ್‌ 9 (6 ಎ., 4X2), ಚಾಹರ್‌ ಔಟಾಗದೆ 1 (1 ಎ), ಕುಲದೀಪ್ ಔಟಾಗದೆ 2 (2 ಎ)

ಇತರೆ 10 (ಲೆಗ್‌ಬೈ1, ನೋಬಾಲ್‌ 1, ವೈಡ್‌ 8)

ವಿಕೆಟ್ ಪತನ: 1–63 (ಕೆ.ಎಲ್‌.ರಾಹುಲ್; 14.6), 2–84 (ಶಿಖರ್‌ ಧವನ್; 20.6), 3–224 (ಇಶಾನ್‌ ಕಿಶನ್; 42.1), 4–227 (ದೀಪಕ್‌ ಹೂಡಾ; 42.6), 5–256 (ಸಂಜು ಸ್ಯಾಮ್ಸನ್‌; 45.6), 6–272 (ಅಕ್ಷರ್‌ ಪಟೇಲ್; 47.4), 7–282 (ಶುಭಮನ್‌ ಗಿಲ್‌; 49.1), 8–286 (ಶಾರ್ದೂಲ್‌ ಠಾಕೂರ್‌; 49.3)

ಬೌಲಿಂಗ್‌: ರಿಚರ್ಡ್ ಎನ್‌ಗರ್ವಾ 9–0–58–0, ವಿಕ್ಟರ್ ನಯುಚಿ 10–1–48–1, ಬ್ರಾಡ್‌ ಇವಾನ್ಸ್‌ 10–0–54–5, ಸಿಕಂದರ್‌ ರಝಾ 10–1–39–0, ಲೂಕ್ ಜಾಂಗ್ವೆ 5–0–49–1, ಸೀನ್‌ ವಿಲಿಯಮ್ಸ್‌ 5–0–30–0, ಟೋನಿ ಮುನ್ಯಾಂಗೊ 1–0–10–0

ಜಿಂಬಾಬ್ವೆ 276 (49.3 ಓವರ್‌))

ಕೈಟಾನೊ ಸಿ ಇಶಾನ್‌ ಬಿ ಕುಲದೀಪ್‌ 13 (22 ಎ., 4X1, 6X1), ಕೈಯಾ ಎಲ್‌ಬಿಡಬ್ಲ್ಯು ಬಿ ಚಾಹರ್‌ 6 (9 ಎ., 4X1), ವಿಲಿಯಮ್ಸ್‌ ಎಲ್‌ಬಿಡಬ್ಲ್ಯು ಬಿ ಪಟೇಲ್‌ 45 (46 ಎ., 4X7), ಮುನ್ಯಾಂಗೊ ಸಿ ರಾಹುಲ್‌ ಬಿ ಆವೇಶ್‌ 15 (31 ಎ., 4X2), ರಝಾ ಸಿ ಗಿಲ್‌ ಬಿ ಠಾಕೂರ್‌ 115 (95 ಎ., 4X9, 6X3), ಚಕಾಬ್ವಾ ಸಿ ಮತ್ತು ಬಿ ಪಟೇಲ್‌ 16 (27 ಎ., 4X1), ಬರ್ಲ್‌ ಸಿ ಧವನ್‌ ಬಿ ಚಾಹರ್‌ 8 (16 ಎ), ಜಾಂಗ್ವೆ ಸಿ ಗಿಲ್‌ ಬಿ ಕುಲದೀಪ್ 14 (13 ಎ., 4X1, 6X1), ಇವಾನ್ಸ್‌ ಎಲ್‌ಬಿಡಬ್ಲ್ಯು ಬಿ ಆವೇಶ್‌ 28 (36 ಎ., 4X2), ಎನ್‌ಗರ್ವಾ ಔಟಾಗದೆ 2 (4 ಎ), ನಯುಚಿ ಬಿ ಆವೇಶ್‌ 0 (3 ಎ)

ಇತರೆ 14 (ಲೆಗ್‌ಬೈ–3, ನೋಬಾಲ್‌ –4, ವೈಡ್‌–7)

ವಿಕೆಟ್ ಪತನ: 1–7 (ಇನೊಸೆಂಟ್ ಕೈಯಾ; 2.3), 1–26 (5.6), 2–82 (ಸೀನ್‌ ವಿಲಿಯಮ್ಸ್‌; 16.4), 3–84 (ಟೋನಿ ಮುನ್ಯಾಂಗೊ; 17.5), 4–120 (ರೆಗಿಸ್‌ ಚಕಾಬ್ವಾ; 26.1), 5–122 (ತಕುಡಾವಾಂಶೆ ಕೈಟಾನೊ; 27.2), 6–145 (ರಿಯಾನ್‌ ಬರ್ಲ್‌; 32.1), 7–169 (ಲೂಕ್‌ ಜಾಂಗ್ವೆ; 35.5), 8–273 (ಬ್ರಾಡ್‌ ಇವಾನ್ಸ್‌; 47.6), 9–275 (ಸಿಕಂದರ್‌ ರಝಾ; 48.4), 10–276 (ವಿಕ್ಟರ್ ನಯುಚಿ; 49.3)

ಬೌಲಿಂಗ್‌: ದೀಪಕ್‌ ಚಾಹರ್‌ 10–0–75–2, ಆವೇಶ್‌ ಖಾನ್ 9.3–1–66–3, ಶಾರ್ದೂಲ್‌ ಠಾಕೂರ್‌ 9–0–55–1, ಕುಲದೀಪ್‌ ಯಾದವ್ 10–0–38–2, ದೀಪಕ್ ಹೂಡಾ 1–0–9–0, ಅಕ್ಷರ್‌ ಪಟೇಲ್ 10–1–30–2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.